ನೀವು ಯಾರ ಪರ? ಸಿದ್ದರಾಮಯ್ಯಗೆ ನಳಿನ್‌ ಪ್ರಶ್ನೆ

ಬೆಂಗಳೂರು, ಆ. 14: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ  ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್‍ನಲ್ಲಿ ಹಿಂದುಗಳ ಬಗ್ಗೆ  ಪ್ರಸ್ತಾವಿಸಿದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಿದ್ದರಾಮಯ್ಯನವರಿಂದ ಹೆಚ್ಚು ನೀರಿಕ್ಷೆ ಮಾಡಲು ಆಗಲ್ಲ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮಾತ್ರ ಇದ್ದರು. ಆದರೆ ಮುಖ್ಯಮಂತ್ರಿವಾಗಿ ವರ್ತನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಸಂಭವಿಸಿದ ಗಲಭೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಬೆಂಗಳೂರಿನಲ್ಲಿ ಗಲಭೆ  ನಡೆಯುತ್ತಿರಲಿಲ್ಲ. 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕ್ರಮ ತಗೆದುಕೊಳ್ಳಲಿಲ್ಲ. ಎಸ್‍ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದರಿಂದ ಅವರಿಗೆ ಧೈರ್ಯ ಬಂತು, ಆ ಧೈರ್ಯವೇ ಇವತ್ತು ಇದನ್ನು ಮಾಡಿಸುತ್ತಿದೆ ಎಂದು ಹೇಳಿದ್ದಾರೆ.

ಘಟನೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ನಾನು ಹೇಳಲ್ಲ. ಆದರೆ ಸಿದ್ದರಾಮಯ್ಯ ಅಂದು ಕಠಿಣ ಕ್ರಮ ತೆಗೆದುಕೊಳ್ಳದಿರುವ ಕಾರಣ ಈ ಜನರಿಗೆ ಧೈರ್ಯ ಬಂದಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದ್ದು, ಪಾದರಾಯನಪುರ ಗಲಭೆ ಆದಾಗ ಜಮೀರ್ ಅಹಮ್ಮದ್ ಮೆರವಣಿಗೆ ಮಾಡಿದರು. ಡಿಜೆ ಹಳ್ಳಿ ಗಲಭೆಯಲ್ಲಿ ಸತ್ತವರನ್ನು ಅಮಾಯಕರು ಅಂತಾರೆ ಎಂದು ಆರೋಪಿಸಿದರು.

ಗಲಭೆ ಜೊತೆ ನೇರ ಸಂಪರ್ಕವಿರುವ ನವೀನ್ ಯಾವ ಪಾರ್ಟಿ ಎಂದು ಪ್ರಶ್ನಿಸಿದ ನಳಿನ್ ಕುಮಾರ್, ನವೀನ್ ಕಾಂಗ್ರೆಸ್ ಪಕ್ಷದವನು ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ.  ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಾಕಿದವರು ಯಾರು? ಸಾರ್ವಜನಿಕರಿಗೆ ಭಯ ಸೃಷ್ಟಿಸಿದವರು ಏನೆಂದರು? ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಯಾರು ಎನ್ನುವುದನ್ನು ಜನರು ನೋಡಿದ್ದಾರೆ.  ಭಯವನ್ನು ಸೃಷ್ಟಿ ಮಾಡುವವನು ಭಯೋತ್ಪಾದಕ, ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಲ್ಲುವುದು ಕಾಂಗ್ರೆಸ್ ಎಂದರು. ಗಲಭೆಯಲ್ಲಿ ದೌರ್ಜನ್ಯ ಅನುಭವಿಸಿದ ಕಾಂಗ್ರೆಸ್‌  ಶಾಸಕರು ದಲಿತ ಸಮುದಾಯಕ್ಕೆ ಸೇರಿದವರು, ನೀವು ದಲಿತರ ಪರವಾ ಅಥವಾ ಭಯೋತ್ಪಾದಕರ ಪರವಾ ಎನ್ನುವುದನ್ನು  ಸಿದ್ದರಾಮಯ್ಯ ಮತ್ತು  ಡಿಕೆಶಿ ಸ್ಪಷ್ಟಪಡಿಸಬೇಕೆಂದು ಕಟೀಲು ಆಗ್ರಹಿಸಿದರು.

ಸತ್ತವರನ್ನು, ಗಲಭೆ ಮಾಡಿದವರನ್ನು ಅಮಾಯಕರು ಅಂತ ಯಾಕೆ ಹೇಳ್ತೀರಾ? ಯಾವುದೇ ಸಮಾಜಕ್ಕೆ, ದೇವರ ನಂಬಿಕೆಗಳಿಗೆ ನೋವು ಮಾಡುವುದು ಧರ್ಮವಲ್ಲ. ಆರೋಪಿ ಖಲೀಂ ರಕ್ಷಣೆಗೆ ಮಾಜಿ ಸಚಿವ ಕೆ.ಜೆ. ಜಾರ್ಜ್‌ ನಿಂತಿದ್ದಾರೆ ಎನ್ನುವ ಆರೋಪದ ಕೇಳಿ ಬರುತ್ತಿದೆ.  ಆರೋಪಿಗಳ ರಕ್ಷಣೆಗೆ ನಿಂತವರನ್ನು  ಪಕ್ಷದಿಂದ ಉಚ್ಚಾಟನೆ ಮಾಡಿ ನಿಮ್ಮ ಕಾಳಜಿಯನ್ನು ರುಜುಪಡಿಸಿ ಎಂದು ಕಟೀಲು ಸವಾಲು ಹಾಕಿದರು.

ಕೊಪ್ಪಳದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲು, ಪೋಸ್ಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಪೋಸ್ಟ್ ನೆಪದ ಹಿನ್ನೆಲೆಯಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.  ಏಕಾಏಕಿ ಜನರು ಹೇಗೆ ಸೇರಿದರು, ಪೆಟ್ರೋಲ್ ಬಾಂಬ್‍ಗಳು, ಕಲ್ಲುಗಳು ಎಲ್ಲಿಂದ ಬಂದವು?  ಈ ಗಲಭೆಯಲ್ಲಿ ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿದ್ದು, ಇವುಗಳನ್ನು ನಿಷೇಧ ಮಾಡಬೇಕು. ಜೊತೆಗೆ ಇದರ ಹಿಂದೆ ಯಾರು ಇದ್ದಾರೆ ತನಿಖೆ ಆಗಬೇಕೆಂದರು.

 































































































error: Content is protected !!
Scroll to Top