ದಾಸರಿ ಎಂಬ ನಿತ್ಯ ಅನ್ನ ದಾಸೋಹಿ

ದಾಸರಿ ದುರ್ಗಾ ರಾವ್‌ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣಾ ನದಿಯ ದಂಡೆಯಲ್ಲಿರುವ ರಣಿಗೇರಿತೋಟ ಕಾಲನಿಯಲ್ಲಿ ವಾಸವಾಗಿರುವ ಒಬ್ಬ ಸಾಮಾನ್ಯ ಮೀನು ವ್ಯಾಪಾರಿ. ಬಾಲ್ಯದಲ್ಲೇ ಪೋಲಿಯೊ ಪೀಡಿತರಾಗಿರುವ ದಾಸರಿಯವರ ಓಡಾಟವೇನಿದ್ದರು ವಿಶೇಷವಾಗಿ ತಯಾರಿಸಲಾಗಿರುವ ತ್ರಿಚಕ್ರ ಸ್ಕೂಟಿಯಲ್ಲಿ.

ನಿತ್ಯ ಬೆಳಗ್ಗೆ 4 ಗಂಟೆಗೆ ಏಳುವ ದಾಸರಿ 40 ಕಿ.ಮೀ.ದೂರವಿರುವ ಗುಂಟೂರು ಪೇಟೆಗೆ ತನ್ನ ತ್ರಿಚಕ್ರ ಸ್ಕೂಟಿಯನ್ನು ಚಲಾಯಿಸಿಕೊಂಡು  ಹೋಗುತ್ತಾರೆ. ಮುಖ್ಯ ಮಾರುಕಟ್ಟೆಯ ಫುಟ್ ಪಾತಿನ  ಟೆಂಟ್‌ನಲ್ಲಿ ಬೆಳಗ್ಗೆಯೇ ಅವರ ಮೀನು ವ್ಯಾಪಾರ ಪ್ರಾರಂಭವಾಗುತ್ತದೆ. ಉತ್ತಮ ತಾಜಾ ಮೀನುಗಳನ್ನು ಮಾರುವ ಕಾರಣ  ಅವರಿಗೆ ಖಾಯಂ ಗ್ರಾಹಕರಿದ್ದಾರೆ.   ಹೀಗಾಗಿ  ಸುದೀರ್ಘ ಲಾಕ್‌ ಡೌನ್‌ ದಿನಗಳಲ್ಲೂ ದಾಸರಿಯವರ ವ್ಯಾಪಾರಕ್ಕೇನೂ ವಿಶೇಷ ತೊಂದರೆಯಾಗಲಿಲ್ಲ. ಸರಾಸರಿಯಾಗಿ ಅವರು ನಿತ್ಯ 10 ಸಾವಿರ ತನಕ ಗಳಿಸುತ್ತಾರೆ. ಭಾನುವಾರ ಮತ್ತು ರಜಾದಿನಗಳಂದು ಇನ್ನೂ ಸ್ವಲ್ಪ ಜಾಸ್ತಿಯೇ ಇರುತ್ತದೆ.ಭಾನುವಾರಗಳಲ್ಲಿ  ನಸುಕಿನ 1 ಗಂಟಗೆಲ್ಲ ಅವರು ಹೊರಡಬೇಕಾಗುತ್ತದೆ.

 ಮಧ್ಯಾಹ್ನಕ್ಕೆಲ್ಲ ದಾಸರಿ ವ್ಯಾಪಾರ ಮುಗಿಸಿ ಮನೆಗೆ ವಾಪಸಾಗುತ್ತಾರೆ. ಅಂದಿನ  ಗಳಿಕೆಯಲ್ಲಿ 2,500 ರೂಪಾಯಿಯನ್ನು ಹೆಂಡತಿ ನಾಗಲಕ್ಷ್ಮಿಯ  ಕೈಗಿಡುತ್ತಾರೆ. ಇದು ಮನೆ ಖರ್ಚು, ಉಳಿತಾಯ  ಇತ್ಯಾದಿಗಳ ಬಾಬತ್ತು. ಉಳಿದ 7,500-8,000 ತೆಗೆದುಕೊಂಡು ಆಹಾರದ ಪೊಟ್ಟಣಗಳನ್ನು ಖರೀದಿಸಿ ಮರಳಿ ಗುಂಟೂರು ಪೇಟೆಗೆ ಸ್ಕೂಟಿ ಬಿಡುತ್ತಾರೆ. ಗುಂಟೂರು –ವಿಜಯವಾಡ ಹೆದ್ದಾರಿಯುದ್ದಕ್ಕೂ ಸಿಗುವ ವಲಸೆ ಕಾರ್ಮಿಕರಿಗೆ ಈ ಪೊಟ್ಟಣಗಳನ್ನು ವಿತರಿಸುತ್ತಾರೆ. ನಿರ್ಗತಿಕರು, ಭಿಕ್ಷುಕರು ಹೀಗೆ ಸಮಾಜದ ಎಲ್ಲ ದುರ್ಬಲ ವರ್ಗದವರಿಗೆ ಕಳೆದ ನಾಲ್ಕು ತಿಂಗಳಿಂದ ದಾಸರಿ ಅನ್ನದಾತರಾಗಿದ್ದಾರೆ. ಸ್ಕೂಟಿಯ ಮೂರು ಸುತ್ತಲು ಪ್ಲಾಸ್ಟಿಕ್‌ ಟ್ರೇ ಕಟ್ಟಿ ಅದರ ತುಂಬ ಆಹಾರದ ಪೊಟ್ಟಣಗಳನ್ನು ತುಂಬಿಸುತ್ತಾರೆ.ಮುಗಿದರೆ ಕೂಡಲೇ ಗುಂಟೂರಿಗೆ ಹೋಗಿ ತುಂಬಿಸಿಕೊಂಡು ಬರುತ್ತಾರೆ. ಹೀಗೆ ನಿತ್ಯ 100-150 ಮಂದಿಗೆ ದಾಸರಿಯವರ ಅನ್ನ ದಾಸೋಹ ನಡೆಯುತ್ತದೆ.  

ಮಾರ್ಚ್‌ ನಲ್ಲಿ ಲಾಕ್‌ ಡೌನ್‌ ಜಾರಿಗೆ ಬಂದಾಗಲೇ  ದಾಸರಿಯವರು ವಲಸೆ ಹೋಗುವವರಿಗೆ ಮತ್ತು ಬಡವರಿಗೆ ನೆರವಾಗುವ ಕೆಲಸವನ್ನು ಪ್ರಾರಂಭಿಸಿದ್ದರು.ಆರಂಭದಲ್ಲಿ ಅಗತ್ಯವಿರುವವರಿಗೆ ದಿನಸಿ, ತರಕಾರಿ ಹಂಚುತ್ತಿದ್ದರು.ಹೆಂಡತಿ ಮನೆಯಲ್ಲಿ ತಯಾರಿಸಿ ಕೊಡುವ ಊಟದ ಪೊಟ್ಟಣಗಳನ್ನು ಹಂಚುತ್ತಿದ್ದರು.ಆದರೆ ತಿನ್ನುವವರ ಸಂಖ್ಯೆ ಹೆಚ್ಚಿದ ಬಳಿಕ ಓರ್ವ ಕ್ಯಾಟರರ್ಸ್‌ ಬಳಿಯಿಂದ ಆಹಾರ ಖರೀದಿಸಿ ಹಂಚುತ್ತಿದ್ದಾರೆ.

ದಾಸರಿಗೆ ಹೀಗೆ ದಾನ ಧರ್ಮ ಮಾಡುವ “ಹುಚ್ಚು” ಹತ್ತಿಕೊಂಡದ್ದು ಮೂರು ವರ್ಷದ ಹಿಂದೆ.ಆ ಕತೆ ಹೀಗಿದೆ: ಒಂದು ದಿನ ದಾಸರಿ ವ್ಯಾಪಾರ ಮುಗಿಸಿ ಊಟ ಮಾಡುತ್ತಿರುವಾಗ ಮುದುಕಿಯೊಂದು ಭಿಕ್ಷೆ ಬೇಡುತ್ತಾ ಬಂತು. ದಾಸರಿ 10 ರೂ.ನೋಟು ತೆಗೆದು ಆಕೆಯ ಭಿಕ್ಷಾ ಪಾತ್ರೆಗೆ ಹಾಕಿದರು.ಅದರಿಂದ ಆಕೆಗೇನೂ ಸಮಾಧಾನವಾದಂತೆ ಕಾಣಿಸಲಿಲ್ಲ. ಆದರೂ ಏನೂ ಹೇಳದೆ ಅಲ್ಲಿಯೇ ಇರುವ ಮರದ ಕೆಳಗೆ ಕುಳಿತುಕೊಂಡಳು. ದಾಸರಿ ತಾನು ಏನೋ ಮಹದುಪಕಾರ ಮಾಡಿದಂತೆ ಬೀಗುತ್ತಾ ಊಟ ಮುಗಿಸಿದರು.ಮರದ ಕೆಳಗೆ ಕುಳಿತ ಮುದುಕಿಯಲ್ಲಿ ಯಾವುದೇ ಚಲನೆ ಕಂಡುಬರುತ್ತಿರಲಿಲ್ಲ. ಹತ್ತಿರ ಹೋಗಿ ನೋಡಿದಾಗ ಆಕೆ ಸಾವನ್ನಪ್ಪಿದ್ದಳು. ಹಸಿವೆಯಿಂದ ಕಂಗಾಲಾಗಿಯೇ ಆಕೆಯ ಪ್ರಾಣ ಹೋಗಿತ್ತು. ಆಕೆಗೆ ಆಗ  ಬೇಕಾಗಿದ್ದದ್ದು ಹಣವಲ್ಲ ಆಹಾರ. ಈ ಘಟನೆ ದಾಸರಿಯ ಮನ ಕಲಕಿತು. ಅಂದಿನಿಂದ ಅವರು ಹಸಿದವರಿಗೆ ಅನ್ನ ನೀಡುವ ಕಾಯಕ ಪ್ರಾರಂಭಿಸಿದರು.

ಅಂದಹಾಗೇ ದಾಸರಿಗೆ ತಿಂಗಳಿಗೆ 3,000 ರೂ. ಪಿಂಚಣಿ ಬರುತ್ತದೆ.ಆದನ್ನವರು ದಾನಧರ್ಮಕ್ಕೆ ವಿನಿಯೋಗಿಸುತ್ತಾರೆ. ಅವರ ದಾನದ ಬಗ್ಗೆ ಕೇಳಿ ಹಲವು ಮಂದಿ ಹಣ, ಅಕ್ಕಿ, ತರಕಾರಿಗಳನ್ನು ಕೊಟ್ಟು ಸಹಾಯ ಮಾಡುತ್ತಿದ್ದಾರೆ.

error: Content is protected !!
Scroll to Top