ಸರಕಾರವೇ ಜನರಿಂದ ಖರೀದಿಸುತ್ತಿದೆ ಸೆಗಣಿ
ರಾಯಪುರ:ವಿಚಿತ್ರ ಆದರೂ ಸತ್ಯ.ಈ ರಾಜ್ಯದಲ್ಲಿ ಸೆಗಣಿಗೆ ಬಾರೀ ಬೇಡಿಕೆ.ಈ ಹಿಂದೆ ಆನ್ ಲೈನ್ ಅಂಗಡಿಗಳಲ್ಲಿ ಬೆರಣಿ ಮಾರುತ್ತಿರುವುದು ಸುದ್ದಿಯಾಗಿತ್ತು.ಇದೇ ಮಾದರಿಯಲ್ಲಿ ಉತ್ತರ ಭಾರತದ ರಾಜ್ಯವೊಂದು ಸೆಗಣಿ ಖರೀದಿಗೆ ಮುಂದಾಗಿದೆ. ಗ್ರಾಮೀಣ ಜನ, ಹೈನುಗಾರಿಕೆ, ರೈತರಿಗೆ ಆರ್ಥಿಕ ಉತ್ತೇಜನ ನೀಡುವ ಸಲುವಾಗಿ ಛತ್ತೀಸ್ ಗಢ ಸರ್ಕಾರವು ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಸಾವಯವ, ಎರೆಹುಳು ಗೊಬ್ಬರ ಉತ್ಪಾದನೆಗೆ ಮುಂದಾಗಿರುವ ಸರ್ಕಾರ, ದನಗಾಹಿಗಳಿಂದ ಸಗಣಿ ಸಂಗ್ರಹಿಸತೊಡಗಿದೆ. ಒಂದು ಕೆ.ಜಿ ಸಗಣಿಗೆ 1.50 ರೂ.ನಂತೆ ಖರೀದಿಸಲು ಛತ್ತೀಸ್ಗಢ ಸರ್ಕಾರ ಬೆಲೆ ಮುಂದಾಗಿದೆ.. ಜು.20ರಿಂದ ಹರೇಲಿ ಹಬ್ಬದ ಅಂಗವಾಗಿ ಗೋಧನ್ ನ್ಯಾಯ ಯೋಜನೆ ಅನ್ವಯ ಸೆಗಣಿ ಖರೀದಿಸಲಾಗುವುದು, ಸೆಗಣಿ ಸಂಗ್ರಹಕ್ಕೆ ಮಹಿಳಾ ಸ್ವ ಸಹಾಯ ಸಂಘದವರನ್ನು ಬಳಸಿಕೊಳ್ಳಲಾಗುತ್ತಿದೆ.
ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವದ ಉಪ ಸಮಿತಿ ನೀಡಿದ ವರದಿ ಆಧಾರದ ಮೇಲೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಜೂನ್ 25ರಂದೇ ಈ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಈಗ ಹರೇಲಿ ಹಬ್ಬದಿಂದ ಆರಂಭಗೊಂಡು ಸೆಗಣಿ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಆಗಲಿದ್ದು, ಸಾವಿರಾರು ಟನ್ ಸಗಣಿ ಸಂಗ್ರಹಿಸಿ, ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.