ರಜನಿಕಾಂತ್ ಕನ್ನಡದವರು ಎಂಬ ವಿಷಯ ನಿಮಗೆ ಗೊತ್ತಿದೆ. ಕನ್ನಡದಲ್ಲಿ ಸಾಕಷ್ಟು ಅವಕಾಶ ಸಿಗದೆ ಅವರು ತಮಿಳಿನತ್ತ ವಲಸೆ ಹೋದರು. ಅಲ್ಲಿ ಬಾರೀ ಯಶಸ್ಸು ಕಂಡರು. ತಮಿಳು ಚಿತ್ರರಂಗದಲ್ಲಿ ತಲೈವಾ ಎಂದೇ ಖ್ಯಾತಿಯಾಗಿರುವ ರಜನೀಕಾಂತ್ ಪ್ರಸ್ತುತ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರು. ಬೆಂಗಳೂರಿನಲ್ಲಿ ಜನಿಸಿದ ಶಿವಾಜಿರಾವ್ ಗಾಯಕವಾಡ್ ನಂತರ ತಮಿಳು ಚಿತ್ರರಂಗದ ಮೂಲಕ ಭಾರತದ ಖ್ಯಾತ ನಟನಾಗಿ ಬೆಳೆದದ್ದು ಇತಿಹಾಸ. ತಮ್ಮ ಸಿನಿಜೀವನದ ಆರಂಭದಲ್ಲಿ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅದೇ ಸಮಯದಲ್ಲಿ ತಮಿಳು ಚಿತ್ರರಂಗದಲ್ಲಿ ಮನ್ನಣೆ ಸಿಗಲಾರಂಭಿಸಿದ್ದರಿಂದ ಸಂಫೂರ್ಣವಾಗಿ ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಡಾ. ರಾಜಕುಮಾರ್ ಮೇಲೆ ಅಪಾರ ಅಭಿಮಾನ ಹೊಂದಿರುವ ರಜನಿ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಪರಮಾಪ್ತ ಸ್ನೇಹಿತರಾಗಿದ್ದರು. ರಜನೀಕಾಂತ್ ಅವರು ಕನ್ನಡದಲ್ಲಿ ನಟಿಸಿದ ಎಲ್ಲಾ ಚಿತ್ರಗಳ ವಿವರ ಇಲ್ಲಿದೆ.
ಕಥಾಸಂಗಮ -1976
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ರಜನೀಕಾಂತ್ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಮತ್ತು ಅವರ ಸಿನಿ ಬದುಕಿನ ಎರಡನೇ ಚಿತ್ರ. ಈ ಚಿತ್ರದಲ್ಲಿ ಪುಟ್ಟಣ್ಣನವರು ಒಂದು ಚಿತ್ರದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಚಿತ್ರ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಚಿತ್ರದಲ್ಲಿ ರಜನಿ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು.
ಬಾಳು ಜೇನು
80 ರ ದಶಕದಲ್ಲಿಯೇ ಈ ಚಿತ್ರ ಕ್ರಾಂತಿಕಾರಿ ಸಾಮಾಜಿಕ ಕಥೆಯನ್ನು ಹೊಂದಿತ್ತು. ಅಚಾತುರ್ಯದಿಂದ ತನ್ನ ಸಂಗಾತಿಯೊಡನೆ ಒಂದು ರಾತ್ರಿ ಕಳೆಯುವ ನಾಯಕಿ ತನ್ನ ಸಂಗಾತಿ ಕಣ್ಮರೆಯಾದಾಗ ಬೇರೆಯವನನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಹಲವು ವರ್ಷಗಳ ನಂತರ ಮತ್ತೆ ಅವಳ ಬಾಳಲ್ಲಿ ಬರುವ ಪ್ರಿಯಕರ ಹೇಗೆ ಬಿರುಗಾಳಿ ತರುತ್ತಾನೆ ಎಂಬುದನ್ನ ಚಿತ್ರ ತೋರಿಸಿತು.
ಒಂದು ಪ್ರೇಮದ ಕಥೆ
ಜೋಸೈಮನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಜನಿ, ಅಶೋಕ್, ಶಾರದಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪನವರ ಛಾಯಾಗ್ರಹಣವಿತ್ತು.
ಸಹೋದರರ ಸವಾಲ್
ಬಾಲ್ಯದಲ್ಲಿ ಬೇರೆಯಾದ ಇಬ್ಬರು ಸಹೋದರರು ಬೇರೆ ವಾತಾವರಣದಲ್ಲಿ ಬೆಳೆದು ಪರಸ್ಪರ ವಿರುದ್ಧವಾಗಿ ಹೋರಾಡಲು ನಿಲ್ಲುತ್ತಾರೆ. ನಂತರ ತಾವು ಪರಸ್ಪರ ಸಹೋದರರೆಂದು ಅರಿತು ಬಾಲ್ಯದಲ್ಲಿ ತಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದವರ ವಿರುದ್ದ ಸಿಡಿದೇಳುತ್ತಾರೆ.
ಕುಂಕುಮ ರಕ್ಷೆ
ಈ ಚಿತ್ರದಲ್ಲಿ ರಜನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ತಾನು ಪ್ರೀತಿಸಿದ ಹುಡುಗಿ ಬೇರೆಯವರನ್ನು ವಿವಾಹವಾಗಿದನ್ನು ತಿಳಿದು ನೋವನ್ನು ಅನುಭವಿಸಿದ ವೈದ್ಯನು ಮುಂದೆ ತಾನು ಪ್ರೀತಿಸಿದ ಹುಡುಗಿಯ ಗಂಡನಿಗೆ ಪದೇ ಪದೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಬರುತ್ತದೆ.
ಗಲಾಟೆ ಸಂಸಾರ
ಈ ಚಿತ್ರದಲ್ಲಿ ರಜನಿಕಾಂತ್ ತನ್ನ ಹೆಂಡತಿಯೊಂದಿಗಿನ ವಿರಸದಿಂದ ಡೈವೋರ್ಸ್ ನೀಡಿ ಬೇರೊಂದು ಯುವತಿಯ ಹಿಂದೆ ಹೋಗುವ ಪಾತ್ರದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಶ್ರೀಮಂತ ತಂದೆಯ ಪುತ್ರನಾಗಿ, ನಂತರ ತಾನು ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟು ಹೋಗುವ ಯುವಕನಾಗಿ ನಟಿಸಿದ್ದರು.
ಕಿಲಾಡಿ ಕಿಟ್ಟು
ಈ ಚಿತ್ರದಲ್ಲಿ ರಾಬಿನ ಹುಡ್ ಮಾದರಿಯ ಕಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಕಳ್ಳನನ್ನು ಹಿಡಿಯುವ ಪಾತ್ರದಲ್ಲಿ ರಜನಿಕಾಂತ್ ಪೋಲಿಸ್ ಅವತಾರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಮೂರನೇ ಬಾರಿಗೆ ವಿಷ್ಣು-ರಜನಿ ಜೊತೆಗೂಡಿದರು. ನಟಿ ಸುಧಾರಾಣಿ ಬೇಬಿ ಜಯಶ್ರೀ ಹೆಸರಿನಲ್ಲಿ ಬಾಲನಟಿಯಾಗಿ ನಟಿಸಿದ್ದರು.
ಮಾತು ತಪ್ಪದ ಮಗ
ಶಿವರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಾತು ತಪ್ಪಿದ ಮಗ ಚಿತ್ರದಲ್ಲಿ ಅನಂತನಾಗ್. ಆರತಿ, ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆರ್.ಎನ್.ಜಯಗೋಪಾಲ್ ಸಾಹಿತ್ಯದಲ್ಲಿ ಮೂಡಿಬಂದ ಗೀತೆಗಳಿಗೆ ಇಳಯರಾಜ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿ ರಜನಿ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದರು.
ತಪ್ಪಿದ ತಾಳ
ಒಬ್ಬ ರೌಡಿ ಮತ್ತು ವೇಶ್ಯೆ ಮನ ಪರಿವರ್ತನೆಯಾಗಿ ಸಮಾಜದಲ್ಲಿ ಮತ್ತೆ ಒಂದಾಗಿ ಬಾಳಲು ಬಂದಾಗ ಸಮಾಜ ಅವರನ್ನು ಕಾಣುವ ಪರಿಯನ್ನು ಚಿತ್ರ ಮನೋಜ್ಞವಾಗಿ ತೋರಿಸಿತು. ಬದುಕಿನ ತಾಳ ಒಮ್ಮೆ ತಪ್ಪಿದರೆ ಮತ್ತೆ ಸರಿಮಾಡಲು ಬಾರದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು. ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಪ್ರಿಯಾ
ಖ್ಯಾತ ಚಿತ್ರನಟಿ ಪ್ರಿಯಾ (ಶ್ರೀದೇವಿ) ಮತ್ತು ಅವಳ ಬಾಯ್ ಫ್ರೆಂಡ್ ಭರತ್ (ಅಂಬರೀಶ್) ಮದುವೆಯಾಗಲು ಅವಳ ಮ್ಯಾನೇಜರ್ ಅಡ್ಡಿಪಡಿಸುತ್ತಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ತನ್ನ ಮೇಲೆ ಆಧಿಕಾರ ನಡಸುತ್ತಿರುವ ಮತ್ತು ಅವಳ ಮದುವೆಗೆ ಅಡ್ಡಿಪಡಿಸುತ್ತಿರುವ ಮ್ಯಾನೇಜರ್ ನನ್ನು ಮಟ್ಟಹಾಕಲು ಲಾಯರ್ ಗಣೇಶ್ (ರಜಿನಿಕಾಂತ್) ಮೊರೆ ಹೋಗುತ್ತಾಳೆ.
ಘರ್ಜನೆ
ಈ ಚಿತ್ರದಲ್ಲಿ ರಜನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರಲು ಯಶಸ್ವಿಯಾಗುತ್ತಾನೆ.ಈ ಚಿತ್ರ ಕನ್ನಡ ,ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಯಿತು.