ಅ. 9ರಂದು ಭಾರತಕ್ಕೆ ತಾಲಿಬಾನ್ ವಿದೇಶಾಂಗ ಸಚಿವ ಭೇಟಿ

ದೆಹಲಿ : ತಾಲಿಬಾನ್‌ ಸರಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅ.9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಭಾರತಕ್ಕೆ ಮೊದಲ ಉನ್ನತ ಮಟ್ಟದ ಭೇಟಿಯಾಗಲಿದೆ. ಇದು ಭಾರತ-ತಾಲಿಬಾನ್ ಸಂಬಂಧದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.

ಮುತ್ತಕಿ ದೆಹಲಿ ಭೇಟಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದನೆ ನೀಡಿದೆ. 1988ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಅಡಿಯಲ್ಲಿ ತಾಲಿಬಾನ್ ನಾಯಕರು ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮಿತಿಯ ಪೂರ್ವಾನುಮತಿ ಪಡೆಯುವ ಅಗತ್ಯವಿದೆ. ಅಂತೆಯೇ ಇದೀಗ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಗೆ ಅನುಮತಿ ಕೋರಿದ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಮುತ್ತಕಿ ಅಕ್ಟೋಬರ್ 6 ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದು, ಬಳಿಕ ಅಲ್ಲಿಂದ ಅಕ್ಟೋಬರ್ 9ರಂದು ಭಾರತಕ್ಕೆ ಆಗಮಿಸಲಿದ್ದು, ಅ. 16 ರವರೆಗೆ ದೆಹಲಿಯಲ್ಲಿರುತ್ತಾರೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ.

ಅಮೀರ್ ಖಾನ್ ಮುತ್ತಕಿ ಅವರು ನವದೆಹಲಿಗೆ ಆಗಮಿಸುತ್ತಿರುವುದು ಭಾರತ- ತಾಲಿಬಾನ್ ಸಂಬಂಧದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಯಾಕೆಂದರೆ ಇದು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭಾರತದ ಕಾರ್ಯತಂತ್ರದ ನಡೆಯಾಗಿದೆ. ಭಾರತೀಯ ರಾಜತಾಂತ್ರಿಕ ವಲಯಗಳು ತಿಂಗಳುಗಳಿಂದ ಈ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ. ಜನವರಿಯಿಂದ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.















































































error: Content is protected !!
Scroll to Top