ಮಹಿಳೆಗೆ ಮಾರಾಕಾಸ್ತ್ರ ಝಳಪಿಸಿ ದನ ಕದ್ದೊಯ್ದ ದುಷ್ಕರ್ಮಿಗಳು

ಕಾರ್ಕಳ : ಮನೆಯಲ್ಲಿದ್ದ ಮಹಿಳೆಗೆ ಮಾರಾಕಾಸ್ತ್ರ ಝಳಪಿಸಿದ ದುಷ್ಕರ್ಮಿಗಳು ಬಳಿಕ ಹಟ್ಟಿಯಲ್ಲಿದ್ದ ಮೂರು ದನ ಕದ್ದೊಯ್ದ ಘಟನೆ ಅಜೆಕಾರು ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಸೆ. 27ರ ತಡರಾತ್ರಿ ನಡೆದಿದೆ.
ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ 2 ಗಂಟೆಯ ಸುಮಾರಿಗೆ ಧಾವಿಸಿದ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿಯಲು ಯತ್ನಿಸಿ ತಲುವಾರು ಝಳಪಿಸಿ, ಯಾರಿಗಾದರೂ ಕರೆ ಮಾಡಿದಲ್ಲಿ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ಬಳಿಕ ಹಟ್ಟಿಗೆ ನುಗ್ಗಿದ ಕಳ್ಳರು ಮೂರು ದನ ಕಳ್ಳತನಗೈದು ಕಾರಿನಲ್ಲಿ ತುಂಬಿ ಕಳವು ಮಾಡಿರುತ್ತಾರೆ. ನಾಲ್ಕೈದು ಮಂದಿ ಇನ್ನೋವಾ ಹಾಗೂ ರಿಟ್ಜ್‌ ಕಾರಿನಲ್ಲಿ ಬಂದು ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಅಜೆಕಾರು ಠಾಣೆ ಎಸ್‌ಐ ಮಹೇಶ್‌ ಕುಮಾರ್‌ ಹಾಗೂ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ ಪ್ರಾಂತ ಗೋ ರಕ್ಷಾ ಪ್ರಮುಖ್‌ ಸುನಿಲ್‌ ಕೆ.ಆರ್., ಹಿಂದೂ ಜಾಗರಣ ವೇದಿಕೆ‌ಯ ಪ್ರಮುಖರಾದ ರತ್ನಾಕರ್‌ ಅಮೀನ್‌, ಹರೀಶ್‌ ಕಿಚ್ಚ, ರಾಘವೇಂದ್ರ ಕುಲಾಲ್‌, ಸುಜಿತ್‌ ಸಫಲಿಗ, ಸುಕೇಶ್‌ ಶಿರ್ಲಾಲು, ಮನೋಜ್‌ ಕಾರ್ಕಳ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

ನಾಲ್ಕನೇ ಬಾರಿ
ಜಯಶ್ರೀ ಅವರ ಮನೆಯ ಹಟ್ಟಿಯಿಂದ ಗೋ ಕಳ್ಳತನವಾಗುತ್ತಿರುವುದು ಇದೇ ಮೊದಲಲ್ಲ. ಶಿರ್ಲಾಲು ಪ್ರೌಢ ಶಾಲಾ ಬಳಿಯಿರುವ ಇವರ ಹಟ್ಟಿಯಿಂದ ಇದುವರೆಗೆ ನಾಲ್ಕು ಬಾರಿ ಗೋ ಕಳ್ಳತನವಾಗಿದ್ದು ಒಟ್ಟು 12 ದನಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ತಾಯಿ ಹಾಗೂ ಮಗಳು ಮಾತ್ರವೇ ಈ ಮನೆಯಲ್ಲಿದ್ದು, ಈ ಕುಟುಂಬ ಹೈನುಗಾರಿಕೆಯಿಂದ ಜೀವನ ನಿರ್ಹಹಣೆ ಮಾಡುತ್ತಿತ್ತು. ಗೋಕಳ್ಳರ ದುಷ್ಕೃತ್ಯ, ನಿರಂತರ ಗೋಕಳ್ಳತನವಾಗುತ್ತಿರುವುದರಿಂದ ಜಯಶ್ರೀ ಕುಟುಂಬ ಕಂಗೆಟ್ಟಿದ್ದು, ಸ್ಥಳೀಯರೂ ಆತಂಕದಿಂದಿದ್ದಾರೆ.

ನಿರಂತರವಾಗಿ ಜಯಶ್ರೀ ಮನೆಯಿಂದ ದನ ಕಳ್ಳತನವಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮವಹಿಸುತ್ತಿಲ್ಲ. ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ದನಕಳ್ಳರಿಗೆ ಪೊಲೀಸರು, ಕಾನೂನು ಬಗ್ಗೆ ಯಾವೊಂದು ಭಯವೂ ಇಲ್ಲದಂತಾಗಿದೆ. ಗೋ ಕಳ್ಳರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಜಯಶ್ರೀ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಒತ್ತಾಯಿಸಿದ್ದಾರೆ.

























































































































error: Content is protected !!
Scroll to Top