ಉದಯ್ ಜೈನ್ ಸೇರಿದಂತೆ ಹಲವರಿಗೆ ಬುಲಾವ್
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಈಗ ಬಹುದೊಡ್ಡ ತಿರುವು ಸಿಕ್ಕಿದೆ. ಸೌಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿತಾ ಅನ್ನೋ ಪ್ರಶ್ನೆ ಮೂಡಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ಕ್ಲೀನ್‌ಚಿಟ್ ಪಡೆದವರಿಗೆ ವಿಶೇಷ ತನಿಖಾ ತಂಡ ಬುಲಾವ್ ನೀಡಿರುವುದು ಇದಕ್ಕೆ ಕಾರಣವಾಗಿದೆ.
ಕರ್ನಾಟಕ ಪೊಲೀಸ್, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.

ಎಸ್‌ಐಟಿ ಕಚೇರಿಗೆ ಭೇಟಿ ನೀಡುವ ಮುನ್ನ ಮಾಧ್ಯಮದ ಜೊತೆಗೆ ಮಾತನಾಡಿದ ಉದಯ್ ಕುಮಾರ್ ಜೈನ್, ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಕೇಳಿಕೆಯ ಕಾರಣದಿಂದಲೂ ನನ್ನನ್ನ ಎಸ್‌ಐಟಿ ಕರೆದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದಿರುವ ಅವರು ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಈಗ ವಿಷಯಾಂತರ ಮಾಡುವುದಕ್ಕೆ ಈ ರೀತಿ ಮಾತಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣ ಮುನ್ನೆಲೆಗೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೌಜನ್ಯ ಮನೆ ಮೇಲೆ ಇಡಿ ದಾಳಿ ಮಾಡಲಿ
ಸೌಜನ್ಯ ಸತ್ತು ಒಂದು ವರ್ಷದ ನಂತರ ನಮ್ಮ ಹೆಸರು ಸೇರಿಸುವ ಕುತಂತ್ರ ನಡೆಯಿತು. ಆದರೆ ಎಫ್‌ಐಆರ್ ಕಾಪಿಯಲ್ಲಿ ನನ್ನ ಹೆಸರೇ ಇಲ್ಲ. ಈಗ ನಮ್ಮನ್ನೆಲ್ಲಾ ದಿಕ್ಕಾಪಾಲು ಮಾಡಿ ಸೌಜನ್ಯ ತಾಯಿ ದೊಡ್ಡ ಮನೆಯಲ್ಲಿ ಆರಾಮಾಗಿದ್ದಾರೆ. ಅವರ ಮನೆ ಮೇಲೂ ಇಡಿ ರೇಡ್ ಆಗಬೇಕು ಎಂದು ಉದಯ್ ಜೈನ್ ಒತ್ತಾಯಿಸಿದರು.



























































