ಮುಂಬೈ : ಅಂಡರ್ ವರ್ಲ್ಡ್ ಜಗತ್ತಿನ ಅಟ್ಟಹಾಸ ಹುಟ್ಟಡಗಿಸಿದ್ದ ಕನ್ನಡಿಗ, ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜು. 31ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಭೂಗತ ಪಾತಕಿಗಳ ಬೆದರಿಕೆಯಿಂದ ಬೆದರಿದ್ದ ಮುಂಬೈ ನಗರದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗುವಲ್ಲಿ, ಅವರ ಬದುಕಿಗೆ ಧೈರ್ಯವಾಗಿದ್ದ ಕಾರ್ಕಳದ ದಯಾ ನಾಯಕ್ ಇದೀಗ ವಿಶ್ರಾಂತರಾಗಲಿದ್ದಾರೆ.
1995ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ದಯಾ ನಾಯಕ್ 2004ರ ವೇಳೆಗೆ ಡಾನ್ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಛೋಟಾ ರಾಜನ್‌ನ ಸಹಚರು ಸೇರಿದಂತೆ ಭೂಗತ ಜಗತ್ತಿನ 85 ರೌಡಿಗಳನ್ನು ಎನ್‌ಕೌಂಟರ್ ಮೂಲಕ ಅವರ ದುಷ್ಕೃತ್ಯಕ್ಕೆ ಅಂತ್ಯ ಹಾಕಿದ್ದರು. ಕಾರ್ಯಾಚರಣೆ ವೇಳೆ ಗ್ಯಾಂಗ್‌ಸ್ಟರ್‌ಗಳಿಂದ 8 ಗುಂಡೇಟು ತಗುಲಿದ್ದರೂ ತಾನು ಬದುಕುಳಿಯಲು ಸೇವೆ ಪೂರ್ಣಗೊಳಿಸಲು ದೇವರ ಅನುಗ್ರಹ ಜನರ ಹಾರೈಕೆಯೇ ಶ್ರೀರಕ್ಷೆ ಎಂದಿದ್ದರು.
ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್‌ಗೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು. ಕಂದಹಾರ್ ವಿಮಾನ ಅಪಹರಣ ಘಟನೆ ಸೇರಿದಂತೆ ದೇಶ ಎದುರಿಸಿದ ಕ್ಲಿಷ್ಟಕರ ಪರಿಸ್ಥಿತಿ, ಸವಾಲಿನ ಸಂದರ್ಭದಲ್ಲೂ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿಕೊಂಡವರು ದಯಾ ನಾಯಕ್.

ಎಣ್ಣೆಹೊಳೆಯವರು
ಕಾರ್ಕಳ ಸಮೀಪದ ಎಣ್ಣೆಹೊಳೆಯ ಬಡ್ಡಾ ನಾಯಕ್ ಹಾಗೂ ರಾಧಾ ನಾಯಕ್ ದಂಪತಿ ಪುತ್ರರಾಗಿ ಜನಿಸಿರುವ ದಯಾ ನಾಯಕ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಎಣ್ಣೆಹೊಳೆಯಲ್ಲಿ ಪೂರೈಸಿದ್ದರು. ಬಳಿಕ ಉದ್ಯೋಗ ಅರಸಿ ಮುಂಬೈಯತ್ತ ಮುಖ ಮಾಡಿದ ಅವರು ಅಲ್ಲಿ ಕ್ಯಾಂಟೀನ್ ಸೇರಿದರು. ಬಹಳ ಕಷ್ಟದಿಂದಲೇ ಓದು ಮುಂದುವರಿಸಿ ಮುಂಬೈನಲ್ಲೇ ಪದವಿ ಪಡೆದರು. ಅನಂತರ ಪ್ಲಂಬರ್ ಸೂಪರ್‌ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ದಯಾನಾಯಕ್ 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
ಹುಟ್ಟೂರಿನಲ್ಲಿ ಶಾಲೆ ಸ್ಥಾಪನೆ
ಕಡು ಬಡತನದಲ್ಲಿ ಓದಿ, ಬೆಳೆದಿರುವ ದಯಾನಾಯಕ್ ತನ್ನೂರಿನ ಮಕ್ಕಳು ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಯಾವೊಂದು ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಎಣ್ಣೆಹೊಳೆಯಲ್ಲಿ ತನ್ನ ತಾಯಿ ಹೆಸರಲ್ಲಿ “ರಾಧಾ ನಾಯಕ್” ಪ್ರೌಢಶಾಲೆ (2000 ಇಸವಿ) ಸ್ಥಾಪಿಸಿದ್ದರು. ಅತ್ಯಂತ ಸುಂದರ, ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ಸುನಿಲ್ ಶೆಟ್ಟಿ, ಅಫ್ತಬ್ ಶಿವದಾಸನಿ, ಪಕ್ಷಿ ತಜ್ಞ ಎಂ.ಎಫ್. ಹುಸೇನ್ ಆಗಮಿಸಿದ್ದರು. ದಯಾನಾಯಕ್ ಅವರ ಜೀವನ, ಸಾಧನೆ ಕುರಿತು ವಿವಿಧ ಭಾಷೆಗಳಲ್ಲಿ ಹತ್ತಾರು ಸಿನೆಮಾ, ಧಾರಾವಾಹಿಗಳು ನಿರ್ಮಾಣವಾಗಿರುವುದೇ ಅವರ ಸಾಧನೆಗೆ ಸಾಕ್ಷಿ.





































