ಅಂಗಡಿಗೆ ಪರಿಕರ ನೀಡುವುದಾಗಿ ಮಹಿಳೆಗೆ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯಡಿ ಮಂಜೂರಾದ 9.50 ಲಕ್ಷ ರೂ. ವಂಚನೆ – ಆರೋಪಿ ಬಂಧನ

ಕಾರ್ಕಳ : ಅಂಗಡಿಗೆ ಪರಿಕರ ನೀಡುವುದಾಗಿ ಮಹಿಳೆಯೋರ್ವರಿಗೆ ಯುವಕನೋರ್ವ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯಡಿ ಮಂಜೂರಾದ 9.50 ಲಕ್ಷ ರೂ. ಹಣವನ್ನು ವಂಚಿಸಿರುವ ಘಟನೆ ಕಾರ್ಕಳದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಅತ್ತೂರು ದೂಪದಕಟ್ಟೆ ನಿವಾಸಿ ರಾಘವೇಂದ್ರ ಎಸ್. ಬಂಧಿತ ಆರೋಪಿ

ಘಟನೆ
ಕೌಡೂರು ಗ್ರಾಮದ ಕವಿತಾ ಕೃಪಾಲಿನಿ ಎಂಬವರು ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಬುಕ್ ವ್ಯಾಪಾರದ ಅಂಗಡಿಯನ್ನು ನಡೆಸಿಕೊಂಡಿರುತ್ತಾರೆ. ಇವರಿಗೆ ಪರಿಚಯಸ್ಥನಾಗಿರುವ ಅತ್ತೂರು ದೂಪದಕಟ್ಟೆ ನಿವಾಸಿ ರಾಘವೇಂದ್ರ ಎಸ್. ಎಂಬಾತ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್ ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಸಾಲಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಅವನದೇ ಆದ ಲಕ್ಷ್ಮೀ ಎಂಟರ್ಪ್ರೈಸಸ್ ಮಳಿಗೆಯ ಕೊಟೇಶನ್ ನೀಡಿರುತ್ತಾನೆ. ನಂತರ ಕವಿತಾ ಪಿಎಂಈಜಿಪಿ ಯೋಜನೆಯ ಸಾಲಕ್ಕಾಗಿ ದಾಖಲೆ ಹಾಗೂ ಕೊಟೇಶನನ್ನು ತಾನು ಖಾತೆ ಹೊಂದಿರುವ ಕಣಜಾರು ಕೆನರಾ ಬ್ಯಾಂಕ್‌ಗೆ ನೀಡಿರುತ್ತಾರೆ ಮತ್ತು ಅವರಿಗೆ 9.50 ಲಕ್ಷ ಲೋನ್ ಸ್ಯಾಂಕ್ಷನ್ ಆಗಿರುತ್ತದೆ. ಬಳಿಕ ಕವಿತಾ 2024ರ ಡಿಸೆಂಬರ್‌ 18ರಂದು ಕೊಟೇಶನ್ ನೀಡಿದ ಲಕ್ಷ್ಮೀ ಎಂಟರ್ಪ್ರೈಸಸ್‌ನ ಖಾತೆ ಇರುವ ಐಸಿಐಸಿಐ ಬ್ಯಾಂಕ್ ಕಾರ್ಕಳ ಇದಕ್ಕೆ 9.50 ಲಕ್ಷ ಹಣ ವರ್ಗಾವಣೆ ಮಾಡಿರುತ್ತಾರೆ. ಈ ವೇಳೆ ರಾಘವೇಂದ್ರ 25 ದಿನಗಳಲ್ಲಿ ಕೊಟೇಶನ್‌ನಲ್ಲಿರುವ ಎಲ್ಲಾ ಸಾಮಗ್ರಿಗಳನ್ನ ನೀಡುವುದಾಗಿ ಭರವಸೆ ನೀಡಿರುತ್ತಾನೆ. ಆದರೆ ನಂತರ ಯಾವುದೇ ಸಾಮಗ್ರಿಗಳನ್ನ ಕೊಡದೆ ರಾಘವೇಂದ್ರ ಕವಿತಾ ಅವರಿಗೆ ಮೋಸ ಮಾಡಿದ್ದಾನೆ. ಈ ಬಗ್ಗೆ ಕವಿತಾ ನೀಡಿರುವ ದೂರಿನಂತೆ 2025ರ ಎ. 22ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನಲ್ಲಿ ಆರೋಪಿಯ ಬಂಧನ
ಎಎಸ್‌ಪಿ ಡಾ. ಹರ್ಷಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ. ಆರ್, ಪೊಲೀಸ್ ಉಪ ನಿರೀಕ್ಷಕರಾದದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿ ಜೂ. 6ರಂದು ಬೆಂಗಳೂರಿನ ಗಾಂಧಿನಗರದಲ್ಲಿ ಆರೋಪಿ ರಾಘವೇಂದ್ರ ಎಸ್. ನನ್ನು ವಶಕ್ಕೆ ಪಡೆದು, ಜೂ. 7ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿದ್ದಾನೆ. ಈತನು ಈ ಹಿಂದೆ ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.































































































error: Content is protected !!
Scroll to Top