ಕಾರ್ಕಳ : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು (ಜು.22) ಮಧ್ಯಾಹ್ನ ಬೀಸಿದ ಸುಂಟರಗಾಳಿಗೆ ಕಾರ್ಕಳ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕೋಟಿ ಚೆನ್ನಯ ಥೀಮ್ ಪಾರ್ಕ್‌ನಲ್ಲಿ ಮರ ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾಗಿದೆ. ಕಾರ್ಕಳ ಪೇಟೆಯಲ್ಲಿ ಬೃಹದಾಕಾರದ ಮರ ನೆಲಕ್ಕುರುಳಿ ರಿಕ್ಷಾ ಜಖಂಗೊಂಡಿದೆ. ಇನ್ನು ಅನಂತಶಯನ ದೇವಸ್ಥಾನದಲ್ಲಿ ಮರ ಬಿದ್ದಿದೆ. ಕಿಂಗ್ಸ್ ಬಾರ್ ಸಮೀಪ ಮನೆಯೊಂದು ಹಾನಿಗೊಳಗಾಗಿದೆ. ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಣ ದೇವಸ್ಥಾನದ ನಾಗನ ಕಟ್ಟೆಯ ಅಶ್ವಥ ಮರದ ಕೊಂಬೆ ಬಿದ್ದು ಕಟ್ಟೆಗೆ ಅಳವಡಿಸಿದ ಶೀಟು ಹಾನಿಗೊಳಗಾಗಿದೆ. ಕೌಡೂರು ಗ್ರಾಮದ ಮಾಣಿಕುಮೇರಿ ಹಾಗೂ ಕಣಂಜಾರು ಗುಂಡು ಪಾದೆಯಲ್ಲಿ ರಸ್ತೆ ಮರ ಬಿದ್ದಿದೆ ಹೀಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ.

ಹಾನಿಯಾದ ಸ್ಥಳಗಳಿಗೆ ತಹಶೀಲ್ದಾರ್ ನರಸಪ್ಪ, ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜು. 20ರಂದು ಸುರಿದ ಮಳೆಗೆ ಇನ್ನಾ ಗ್ರಾಮದ ಪ್ರೀತಾ ಕುಲಾಲ್ ಅವರ ಮನೆಗೆ ಪಕ್ಕದಲ್ಲಿದ್ದ ಮಣ್ಣು ಕುಸಿತವಾಗಿದ್ದು, 30 ಸಾ. ರೂ. ನಷ್ಟ ಸಂಭವಿಸಿದೆ. ಮಾಳ ಗ್ರಾಮದ ಬೇಬಿ ಅವರ ವಾಸದ ಮನೆ ಮೇಲೆ ಮರ ಬಿದ್ದು 20 ಸಾ. ರೂ. ನಷ್ಟ, ಪಳ್ಳಿ ಗ್ರಾಮದ ಮಕ್ಕೇರು ಬೈಲು ಶಂಕರ್ ನಾಯಕ್ ಅವರ ಮನೆಯ ಕಾಂಪೌಂಡ್ ಕುಸಿದು 60 ಸಾ. ರೂ. ನಷ್ಟ, ಕಲ್ಯಾ ಗ್ರಾಮದ ನೆಲ್ಲಿಗುಡ್ಡೆಯ ಭಾಸ್ಕರ್ ಪೂಜಾರಿ ಅವರ ಅಂಗಡಿ ಕೋಣೆ ಮೇಲೆ ಮರ ಬಿದ್ದು ಹಾನಿ ಆಗಿರುತ್ತದೆ. ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲನಿಯಲ್ಲಿ ಸುಶೀಲ ಶೆಟ್ಟಿಗಾರ್ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿ 7000 ರೂ. ನಷ್ಟ, ಪಾರಡಿಯ ಶಾಂತ ಬಾಯಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಮೇಲ್ಛಾವಣಿ ಮತ್ತು ಗೋಡೆ ಹಾನಿಯಾಗಿ 50 ಸಾ. ರೂ. ನಷ್ಟ ಉಂಟಾಗಿದೆ.


ಜು. 21ರಂದು ಮುಂಡ್ಕೂರು ಗ್ರಾಮದ ಅಂಗಡಿಗುತ್ತು ಎಂಬಲ್ಲಿನ ದೀಪಾಲತಾ ಶೆಟ್ಟಿಯವರ ಮನೆಯ ಗೋಡೆ ಕುಸಿದಿದ್ದು ಅಂದಾಜು 60 ಸಾ. ರೂ. ನಷ್ಟ ಸಂಭವಿಸಿರುತ್ತದೆ. ಮಾಳದ ಹುಕ್ರಟ್ಟೆಯ ಉಮೇಶ್ ಪೂಜಾರಿ ಅವರ ಮನೆಯ ಹಾನಿಗೊಳಗಾಗಿದ್ದು 25 ಸಾ. ರೂ. ನಷ್ಟ, ಇನ್ನಾ ಗ್ರಾಮದ ಜಾನಕಿ ಪೂಜಾರಿ ಅವರ ಮನೆಗೆ ಹಾನಿಯಾಗಿದ್ದು 80 ಸಾ. ರೂ. ನಷ್ಟ, ನಂದಳಿಕೆ ಗ್ರಾಮದ ಪಟ್ಲಕೋಡಿಯ ಸುಶೀಲಾ ದೇವಾಡಿಗ ಅವರ ಮನೆಯ ಹತ್ತಿರದಲ್ಲಿರುವ ಮಾವಿನ ಮರ ಗದ್ದೆ ಬದಿಗೆ ಬಿದ್ದು ಹಾನಿಯಾಗಿದೆ. ಕಾರ್ಕಳ ಗ್ರಾಮದ ಬೊಬ್ಬಳದ ರಾಜೀವಿ ಹೆಗ್ಡೆ ಅವರ ದನದ ಕೊಟ್ಟಿಗೆಗೆ ಮರ ಬಿದ್ದು 1 ಲಕ್ಷ ರೂ. ನಷ್ಟ, ಕಜೆ ನಿವಾಸಿ ಮೊಹಮದ್ ಅಲಿ ಸಾಬ್ ಅವರ ಮನೆ ಹಾನಿಗೊಳಗಾಗಿ 40 ಸಾ. ರೂ. ನಷ್ಟ, ನೂರಾಲ್ ಬೆಟ್ಟು ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪಿಲಿಚಂಡಿ ದೇವಸ್ಥಾನಕ್ಕೆ ಮರ ಬಿದ್ದು 25 ಸಾ. ರೂ. ನಷ್ಟ, ಕುಕ್ಕುಂದೂರು ಗ್ರಾಮದ ಪರಪ್ಪು ಶೋಭಾ ಎಂಬವರ ಮನೆ ಮೇಲೆ ಮರ ಬಿದ್ದು 3000 ರೂ. ನಷ್ಟ, ವಿನ್ಸೆಂಟ್ ಅವರ ತೋಟ ಹಾನಿಯಾಗಿ 22 ಸಾ. ರೂ. ನಷ್ಟ, ಸೇಸಪ್ಪ ಪೂಜಾರಿ ಅವರ ಹಟ್ಟಿಗೆ ಮರ ಬಿದ್ದು 8 ಸಾ. ರೂ. ನಷ್ಟ, ನೂರಾಲ್ ಬೆಟ್ಟು ಮರ್ಸೆಲ್ ಡಿಸೋಜ ಅವರ ಅಡಿಕೆ ತೋಟ ಹಾನಿಯಾಗಿ 20 ಸಾ. ರೂ. ನಷ್ಟ, ಅಲ್ಯಾಸ್ ಅವರ ತೋಟ ಹಾನಿಗೊಳಗಾಗಿ 12 ಸಾ. ರೂ. ನಷ್ಟ ಹಾಗೂ ಸಿದ್ಧು ಪೂಜಾರಿಯವರ ಮನೆ ಹಾನಿಯಾಗಿ 15 ಸಾ. ರೂ. ನಷ್ಟ ಸಂಭವಿಸಿದೆ.









