ಕಾರ್ಕಳ ಬಿಜೆಪಿ ಮಹಿಳಾ ಕಾರ್ಯಕರ್ತರ ಸಭೆ

ಕಾರ್ಕಳ : ನಾವು ಹಾಕುವ ಒಂದು ಮತ ದೇಶದ ಭದ್ರತೆಯನ್ನು ನಿರ್ಧರಿಸುತ್ತದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ವಿವಿಧ ಯೋಜನೆಗಳ ಮೂಲಕ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಚುಕ್ಕಾಣಿಯನ್ನು ಹಿಡಿಯುವಲ್ಲಿ ನಾರಿಶಕ್ತಿ ಬೆಂಬಲಿಸಬೇಕು ಎಂದು ಚುನಾವಣಾ ಪ್ರಭಾರಿ ಶ್ಯಾಮಲಾ ಕುಂದರ್ ಹೇಳಿದರು.
ಅವರು ಏ. 23ರಂದು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಪಕ್ಷವನ್ನು ಮುನ್ನೆಡೆಸುವ ಜವಾಬ್ದಾರಿ
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತದೊಂದಿಗೆ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿಕೊಂಡು ಬಂದಿದ್ದೇವೆ. ಸಾವಿರಾರು ಕಾರ್ಯಕರ್ತರ ಶ್ರಮದ ಫಲವಾಗಿ ಬಿಜೆಪಿ ಪಕ್ಷ ಇಂದು ಉತ್ತುಂಗದಲ್ಲಿದೆ. ಅಂದು ಕೇಂದ್ರದ ಸಂಸತ್ತಿನಲ್ಲಿ ಎರಡು ಸ್ಥಾನವಿದ್ದಾಗ, ಅಟಲ್‌ಜಿಯವರಿಗೆ ಏನಾದರೂ ಸಮಸ್ಯೆಯಾದರೆ ಅವರನ್ನು ಹೊತ್ತುಕೊಂಡು ಹೋಗಲು ಈ ಸಂಸತ್ತಿನಲ್ಲಿ ನಾಲ್ಕು ಮಂದಿ ಸದಸ್ಯರಿಲ್ಲ ಎಂದು ವಿರೋಧ ಪಕ್ಷದವರು ಅಪಹಾಸ್ಯ ಮಾಡಿದ್ದರು. ಆಗ ಅಟಲ್‌ಜಿಯವರು ಇಂದು ನೀವು ನಾಯಕತ್ವ ಹೊಂದಿರಬಹುದು, ಆದರೆ ಮುಂದೊಂದು ದಿನ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅರ್ಹತೆ ಇಲ್ಲದ ಪರಿಸ್ಥಿತಿಯನ್ನು ನಿಮಗೆ ಬಿಜೆಪಿ ಕಾರ್ಯಕರ್ತರು ಮಾಡುತ್ತಾರೆ ಎಂದಿದ್ದರು. ಅದನ್ನು ಇಂದು ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದ ಶ್ಯಾಮಲಾ ಕುಂದರ್‌ ಅಟಲ್‌ಜಿಯವರು ಕಟ್ಟಿದ ಪಕ್ಷವನ್ನು ಮುನ್ನೆಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನಾರಿಶಕ್ತಿಗೆ ಬೆಂಬಲ
ದೇಶದ ರಾಷ್ಟ್ರಪತಿಯನ್ನಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವ ಮೂಲಕ ದೇಶದ ಚುಕ್ಕಾಣಿಯನ್ನು ಮಹಿಳೆಯ ಕೈಗೆ ನೀಡಲಾಗಿದೆ. ದೇಶದ ಬಜೆಟ್‌ ನಿರ್ಧರಿಸುವ ಅಧಿಕಾರವನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ನೀಡುವ ಮೂಲಕ ಮಹಿಳೆಯರ ಪರವಾಗಿ ನಾವಿದ್ದೇವೆ ಎಂಬುದನ್ನು ಬಿಜೆಪಿ ಸರಕಾರ ತೋರಿಸಿಕೊಟ್ಟಿದೆ. ಆದರೆ ರಾಜ್ಯದಲ್ಲಿ ಮಕ್ಕಳ ಜೀವಕ್ಕೆ ತೊಂದರೆಯಾಗುತ್ತಿರುವ ಈ ವ್ಯವಸ್ಥೆ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ತಾಯಂದಿರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದ ಶ್ಯಾಮಲಾ ಕುಂದರ್‌ ದೇಶದ ಭದ್ರತೆಗಾಗಿ ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡಬೇಕಾಗಿದೆ ಹೇಳಿದರು.

ವಿವಿಧ ಆಯಾಮಗಳಲ್ಲಿ ದೇಶದ ಪ್ರಗತಿ
ಈ ಬಾರಿಯ ಚುನಾವಣೆ ಸ್ಥಳೀಯ ವಿಷಯಗಳಿಗೆ ಸಂಬಂಧಿದಂತೆ ನಡೆಯುವ ಚುನಾವಣೆಯಲ್ಲ. ಬದಲಾಗಿ ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆ. ಇದನ್ನು ಜನರಿಗೆ ಅರ್ಥೈಸುವ ಕೆಲಸವನ್ನು ನಾವು ಮಾಡಬೇಕಿದೆ. ಮೋದಿ ಸರಕಾರದ ಆಡಳಿತದಲ್ಲಿ ಎಲ್ಲ ಆಯಾಮಗಳಲ್ಲೂ ಅಮೂಲಾಗ್ರ ಪ್ರಗತಿ ಕಾಣುತ್ತಿದೆ. ಕೇಂದ್ರದಿಂದ ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಣೆ, ಉಜ್ವಲ ಯೋಜನೆಯ ಮೂಲಕ ಗ್ಯಾಸ್‌ ಸಂಪರ್ಕ, ಮನೆ ಮನೆಗೆ ಶೌಚಾಲಯ, ನಲ್ಲಿ ನೀರಿನ ವ್ಯವಸ್ಥೆಯೂ ಆಗುತ್ತಿದೆ. ಮುಂದಿನ ದಿನಗಳಲ್ಲೂ ಮೋದಿ ಸರಕಾರ ಜನಪರ ಕಾರ್ಯಗಳನ್ನು ಮಾಡಲಿದೆ ಎಂದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಹೇಳಿದರು.

ಕಾಂಗ್ರೆಸ್‌ ಡೇಂಜರ್
ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಘಟನೆ, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಘಟನೆಯಲ್ಲಿ ಕಾಂಗ್ರೆಸ್‌ನಿಂದ ನ್ಯಾಯ ದೊರೆಯುವ ಭರವಸೆಯಿಲ್ಲ. ಬದುಕಿಗೆ ರಕ್ಷಣೆಯಿಲ್ಲದ ವಾತಾವರಣ ರಾಜ್ಯದಲ್ಲಿ ಸರಕಾರ ಸೃಷ್ಟಿ ಮಾಡಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಕಾಂಗ್ರೆಸ್‌ ಡೇಂಜರ್‌ ಎಂದ ಸುನಿಲ್‌ ಕುಮಾರ್ ಜೀವದ ರಕ್ಷಣೆಯಾಗಬೇಕಾದರೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಹಿಂದೂಗಳ ಭವಿಷ್ಯ ನಿರ್ಧರಿಸುವ ಚುನಾವಣೆ
ಉದ್ಯಮಿ ಮಹೇಶ್‌ ಶೆಟ್ಟಿ ಕುಡುಪುಲಾಜೆ ಮಾತನಾಡಿ, ಮೋದಿ ಸರಕಾರದಿಂದ ಮಾತ್ರ ಯುವಪೀಳಿಗೆಯ ರಕ್ಷಣೆ ದೊರೆಯಲಿದೆ. ಹಿಂದೂಗಳ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದ್ದು, ಬಿಟ್ಟಿ ಭಾಗ್ಯಗಳಿಗೆ ಮಾರುಹೋಗದೇ ದೇಶದ ಹಿತದೃಷ್ಟಿಯಿಂದ ಮತ ಚಲಾಯಿಸಬೇಕಿದೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ವಿವಿಧ ಯೋಜನೆಗಳ ಮೂಲಕ ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಂತೆ‌ ಮಾಡಿದೆ. ನಾರೀಶಕ್ತಿಯ ಮೇಲೆ ವಿಶೇಷ ಕಾಳಜಿ ಹೊಂದಿರುವ ಮೋದಿಜಿಯವರಿಗೆ ಧನ್ಯವಾದ ಹೇಳುವ ಅವಕಾಶ ಏ. 26ಕ್ಕೆ ನಮಗೆ ಒದಗಿ ಬಂದಿದೆ ಎಂದರು.

ಯಾವ ಗ್ಯಾರಂಟಿ ಮುಖ್ಯ
ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳ ನಡುವೆ, ಹೆಣ್ಣು ಮಕ್ಕಳ ಜೀವಕ್ಕೆ ಗ್ಯಾರಂಟಿ, ಯುವಕರು ಜೈ ಶ್ರೀರಾಮ್ ಹೇಳಿದರೆ, ಹಣೆಗೆ ತಿಲಕವಿಟ್ಟರೆ ಅವರನ್ನು ಅಡ್ಡಗಟ್ಟಿ ಅವರಿಗೆ ತೊಂದರೆ ನೀಡುವುದಿಲ್ಲವೆಂಬ ಗ್ಯಾರಂಟಿಯನ್ನು ಕಾಂಗ್ರೆಸ್‌ ಸರಕಾರ ಕೊಡುತ್ತದೆಯೆ ಎಂದು ಪ್ರಶ್ನಿಸಿದ ರೇಷ್ಮಾ ಅವರು ನಮ್ಮ ಜೀವನಕ್ಕೆ ಯಾವ ಗ್ಯಾರಂಟಿ ಮುಖ್ಯ ಎಂದು ಆಲೋಚಿಸಿ ಮತ ಹಾಕಬೇಕಿದೆ ಎಂದರು.

ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಚುನಾವಣಾ ಪ್ರಭಾರಿ ಶ್ಯಾಮಲಾ ಕುಂದರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯಾ ಡಿ. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಸುವರ್ಣ ಪ್ರಾರ್ಥಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಸ್ವಾಗತಿಸಿದರು. ತಾಲೂಕು ಮಹಿಳಾ ಮೋರ್ಚಾ ಕೋಶಾಧಿಕಾರಿ ಸುಮಾ ರವಿಕಾಂತ್‌ ನಿರೂಪಿಸಿದರು.























































































































































error: Content is protected !!
Scroll to Top