ರಾಮೇಶ್ವರಂ ಕೆಫೆ ಸ್ಫೋಟ : ಓರ್ವ ಶಂಕಿತ ಸೆರೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಪ್ರಮುಖ ಸಂಚುಕೋರನೊಬ್ಬನನ್ನು ಬಳ್ಳಾರಿ ಜೈಲಿನಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್​ನನ್ನು ಎನ್​ಐಎ ವಶಕ್ಕೆ ಪಡೆದಿದೆ. ಎರಡು ದಿನಗಳಿಂದ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸುಲೇಮಾನ್ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಸುಳಿವು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈತ ಬಳ್ಳಾರಿಯ ಕೌನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ.
ಸುಲೇಮಾನ್​ಗೆ ಐಸಿಸ್ ಉಗ್ರರ ಜತೆ ಸಂಪರ್ಕ ಇತ್ತು. ಈತ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡುತ್ತಿದ್ದ. 2023ರ ಡಿಸೆಂಬರ್ 18ರಂದು ಎನ್​ಐಎ ಅಧಿಕಾರಿಗಳು ಮಿನಾಜ್​​ನನ್ನು ಬಂಧಿಸಿದ್ದರು. ಬಳಿಕ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಮಹತ್ವದ ಸುಳಿವು ಆಧರಿಸಿ ಮಾ.6ರಂದೇ ಶಂಕಿತ ಉಗ್ರ ಮಿನಾಜ್​ನನ್ನು ಎನ್​ಐಎ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ ಕೌಲ್ ಬಜಾರ್​​​ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮಿನಾಜ್ ನಿಷೇಧಿತ ಪಿಎಫ್ಐ ಕಾರ್ಯಕರ್ತನಾಗಿದ್ದ. ಐಸಿಸ್ ಉಗ್ರರ ಜತೆ ನಂಟು ಹೊಂದಿದ್ದ. ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ. 2023ರ ಡಿಸೆಂಬರ್ 18ರಂದು ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಎನ್​ಐಎ ದಾಳಿ ನಡೆಸಿತ್ತು. ಆಗ ಈತನನ್ನು ಬಂಧಿಸಲಾಗಿತ್ತು.

































































































error: Content is protected !!
Scroll to Top