ದೃಷ್ಟಿದೋಷ ಹೊಂದಿರುವ 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಆಶಾಕಿರಣ ಯೋಜನೆ ಸಿಎಂ ಸಿದ್ಧರಾಮಯ್ಯ ನಾಳೆ ಫೆ.18 ರಂದು ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾಕಿರಣ ಯೋಜನೆಯಡಿ ಈಗಾಗಲೇ 8 ಜಿಲ್ಲೆಗಳಲ್ಲಿ ಎಲ್ಲ ಜನರ ಕಣ್ಣಿನ ತಪಾಸಣೆ ಬಹುತೇಕ ಪೂರ್ಣಗೊಂಡಿದ್ದು, ದೃಷ್ಟಿದೋಷ ಹೊಂದಿರುವ 2.45 ಲಕ್ಷ ಜನರಿಗೆ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಉಚಿತವಾಗಿ ಕನ್ನಡಕ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಆಶಾಕಿರಣ ಯೋಜನೆ ದೃಷ್ಟಿ ದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದ್ದು, ಯೋಜನೆಯನ್ನ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲ ಜನರ ಕಣ್ಣಿನ ತಪಾಸಣಾ ಕಾರ್ಯವನ್ನ ಆಶಾ ಕಾರ್ಯಕರ್ತೆಯರು ನಡೆಸಿದ್ದರು. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 56, 59, 036 ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ 8,28, 884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದೆ. 2,45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದೆ. ಅಲ್ಲದೇ 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಇವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಕೂಡಾ ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.









































