ಮರಳಿ ಕುಡಿತ ಶುರು ಮಾಡಿದ ಕಾರಣ ಬೇಸತ್ತು ಸಾವಿಗೆ ಶರಣು
ಕಾರ್ಕಳ : ಮದ್ಯ ಸೇವನೆ ಬಿಟ್ಟಿದ್ದ ತಂದೆ ಮತ್ತೆ ಮದ್ಯ ಸೇವನೆ ಪ್ರಾರಂಭಿಸಿದರೆಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಳದಿಂದ ವರದಿಯಾಗಿದೆ. ಮಾಳ ಗ್ರಾಮದ ಮುಳ್ಳೂರು ಹೈಗೋಳಿ ಬಳಿಯ ಕೌಶಿಕ್ (16) ಎಂಬವನೇ ಕುಣಿಕೆಗೆ ಕೊರಳೊಡ್ಡಿದ್ದ ಬಾಲಕ. ಈತ ಬಜಗೋಳಿ ಸಮೀಪದ ದಿಡಿಂಬಿರಿ ಸರಕಾರಿ ಕಾಲೇಜಿನ ವಿದ್ಯಾರ್ಥಿ.
ತಂದೆ ಗೋಪಾಲ್ ಎಂಬವರು ಕಳೆದ ವರ್ಷ ಮದ್ಯ ವ್ಯಸನ ತ್ಯಜಿಸಿದ್ದರು. ಆಗ ಕೌಶಿಕ್ ತಂದೆಯಲ್ಲಿ ನೀವು ಮತ್ತೆ ಕುಡಿತ ಪ್ರಾರಂಭಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಒಂದು ವರ್ಷ ಕುಡಿತ ಬಿಟ್ಟ ಗೋಪಾಲ್ ಜು. 17ರಂದು ಮದ್ಯ ಸೇವನೆ ಮಾಡಿದ್ದರು. ಇದರಿಂದ ನೊಂದ ಕೌಶಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ವಿದ್ಯಾರ್ಥಿ ತಂದೆ, ತಾಯಿ, ಓರ್ವ ಸಹೋದರ ಹಾಗೂ ಇರ್ವರು ಸಹೋದರಿಯರನ್ನು ಅಗಲಿದ್ದಾರೆ.









































