ತಿರಸ್ಕೃತವಾಗುವ ಭೀತಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದಿಂದ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ನಾಮಪತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲ, ಎಲ್ಲವೂ ಕ್ರಮಬದ್ಧವಾಗಿದೆ. ಹೀಗಾಗಿ ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರವನ್ನು ಕನಕಪುರ ಚುನಾವಣಾಧಿಕಾರಿ ಮಾನ್ಯ ಮಾಡಿದ್ದಾರೆ. ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿದ್ದ ಶಿವಕುಮಾರ್ಗೆ ಇದರಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯ ಆರ್.ಅಶೋಕ್ ಹಾಗೂ ಶಿವಕುಮಾರ್ ನಡುವೆ ಹಣಾಹಣಿ ಏರ್ಪಡಲಿದೆ.
ಏ.17ರಂದು ರಾಮನಗರ ಜಿಲ್ಲೆ ಕನಕಪುರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆಯಿದೆ ಎಂದು ಸ್ವತಹ ಕಾಂಗ್ರೆಸ್‌ನವರು ಪುಕಾರು ಹಬ್ಬಿಸಿದ್ದರು. ಆಸ್ತಿ ಹಾಗೂ ತೆರಿಗೆ ಲೆಕ್ಕಾಚಾರ ಸಮಸ್ಯೆಯಿಂದಾಗಿ ನಾಮಪತ್ರ ರಿಜೆಕ್ಟ್ ಮಾಡುತ್ತಾರೆ ಎನ್ನುವ ಭಯ ಶಿವಕುಮಾರ್ ಅವರಲ್ಲಿತ್ತು. ಮುಂಜಾಗ್ರತಾ ಕ್ರಮವಾಗಿ ಸಹೋದರ ಡಿ.ಕೆ. ಸುರೇಶ್ ಅವರಿಂದ ಸಹ ಕನಕಪುರಕ್ಕೆ ಕೊನೆ ಗಳಿಗೆಯಲ್ಲಿ ನಾಮಪತ್ರ ಹಾಕಿಸಿದ್ದರು.
ಐಟಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದಷ್ಟೇ ಶಿವಕುಮಾರ್ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಏ.17 ರಂದು ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಐಟಿ ಅಧಿಕಾರಿಗಳು ಕನಕಪುರಕ್ಕೆ ಬಂದು ಆಸ್ತಿ ವಿವರದ ಮಾಹಿತಿ ಪಡೆದಿದ್ದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಶಿವಕುಮಾರ್ ತಮ್ಮ ನಾಮಪತ್ರ ತಿರಸ್ಕೃತವಾಗಬಹುದು ಎನ್ನುವ ಪುಕಾರು ಹಬ್ಬಿಸಲಾಗಿತ್ತು. ಇದೆಲ್ಲ ಬಿಜೆಪಿಯವರ ಷಡ್ಯಂತ್ರ. ನಾಮಪತ್ರ ತಿರಸ್ಕೃತಗೊಳಿಸಲು ಸೂಚನೆ ಹೋಗಿದೆ ಎಂದೆಲ್ಲ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಅವರ ಹೇಳಿಕೆಗಳೆಲ್ಲ ಈಗ ಠುಸ್ ಆಗಿವೆ.




























