ಕಾರ್ಕಳ : ಕ್ಷಯ ಮುಕ್ತ ಗ್ರಾಮಕ್ಕಾಗಿ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮ

ಕಾರ್ಕಳ: ಕೇಂದ್ರ ಸರಕಾರದ ಆಶಯದಂತೆ 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಉಡುಪಿ ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ, ಕಾರ್ಕಳ ಕ್ಷಯ ಘಟಕ, ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಶಿರ್ಲಾಲು ಗ್ರಾಮ ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಕ್ಷಯ ಮುಕ್ತ ಗ್ರಾಮಕ್ಕಾಗಿ-ಸಮುದಾಯದ ಸಹಭಾಗಿತ್ವ ಕಾರ್ಯಕ್ರಮವು ಸೆ.19 ರಂದು ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಜರುಗಿತು. ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ ರಮಾನಂದ ಪೂಜಾರಿ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಆಶಯದಂತೆ 2025 ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ಸಂಕಲ್ಪದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಶಿರ್ಲಾಲು ಗ್ರಾಮದ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಿ ಕ್ಷಯ ಮುಕ್ತ ಶಿರ್ಲಾಲ್ ಗ್ರಾಮವನ್ನಾಗಿ ಮಾಡಲು ಶ್ರಮಿಸೋಣ ಎಂದು ಕರೆ ನೀಡಿದರು.
ಕಾರ್ಕಳ ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ಮಾತನಾಡಿ ಕ್ಷಯ ಮುಕ್ತ ಗ್ರಾಮದ ಪರಿಕಲ್ಪನೆಯನ್ನು ವಿವರಿಸುತ್ತ ಶಿರ್ಲಾಲ್ ಗ್ರಾಮದಲ್ಲಿ ಒಟ್ಟು 2409 ಜನ ಸಂಖ್ಯೆ ಇದ್ದು 443 ಮನೆಗಳಿವೆ ಕಳೆದ 5 ವರ್ಷದ ಅವಧಿಯಲ್ಲಿ ಶಿರ್ಲಾಲ್ ಗ್ರಾಮದ ವ್ಯಾಪ್ತಿಯಲ್ಲಿ ಕೇವಲ 4 ಕ್ಷಯರೋಗ ಪ್ರಕರಣಗಳು ಮಾತ್ರ ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯ ಎರಡು ತಂಡಗಳನ್ನು ರಚಿಸಿ ಮನೆ ಭೇಟಿ ನೀಡಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಿದ್ದಾರೆ ಮತ್ತು ಶಂಕಿತ ಕ್ಷಯರೋಗಿಗಳನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಿದ್ದಾರೆ ಹಾಗೂ ಕ್ಷಯರೋಗದ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ ಇಲ್ಲಿನ ವೈದ್ಯಾಧಿಕಾರಿ ಡಾ. ದಿಶಾ ದಿವಾಕರ್ ಇವರು ಕ್ಷಯರೋಗದ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿನ ಎನ್. ಸಿ. ಡಿ ವಿಭಾಗದ ವೈದ್ಯಾಧಿಕಾರಿ ಡಾ. ಶಶಾಂಕ್ ಇವರು ಅಸಾಂಕ್ರಮಿಕ ರೋಗಗಳ ಕುರಿತು ಮಾಹಿತಿ ನೀಡಿದರು. ಶಿರ್ಲಾಲ್ ಗ್ರಾ. ಪಂ. ಉಪಾಧ್ಯಕ್ಷೆ ಪ್ರಮೀಳಾ ಇವರು ಸಮೀಕ್ಷೆ ನಡೆಸುವ ನಮೂನೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಎಸ್. ಇವರು ಕ್ಷಯರೋಗ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ದ ಡಾಟ್ಸ್ ಪ್ಲಸ್ ಸೂಪರ್ವೈಸರ್ ಪ್ರಮೋದ್ ಇವರು ಉಪಸ್ಥಿತರಿದ್ದರು. ನಂದಿನಿ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಸುರೇಖಾ ವಂದಿಸಿದರು. ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.









































































































error: Content is protected !!
Scroll to Top