ಜನನ-ಮರಣ ನೋಂದಣಿ ಕಾಯ್ದೆ 1969– ಕಾನೂನು ಮಾಹಿತಿ

  1. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜನನ ಮತ್ತು ಮರಣಕ್ಕೆ ಸಂಬಂಧಪಟ್ಟ ವಿವರಗಳ ನೋಂದಣಿಯು ಅತ್ಯಾವಶ್ಯಕವಾದ ಪ್ರಕ್ರಿಯೆಗಳಲ್ಲೊಂದಾಗಿದೆ. ವಿದ್ಯಾಭ್ಯಾಸಕ್ಕಾಗಿ ಮಗುವನ್ನು ಶಾಲೆಗೆ ಸೇರಿಸುವಾಗ, ಸರಕಾರ ವಿವಿಧ ಯೋಜನೆಗಳನ್ನು ಪಡೆಯುವಾಗ, ಡ್ರೈವಿಂಗ್ ಲೈಸೆನ್ಸ್, ಪಾಸ್‍ಪೋರ್ಟ್, ಇನ್ಸೂರೆನ್ಸ್, ವಿವಾಹ ನೋಂದಣಿ, ಸೇವೆಗೆ ಸೇರ್ಪಡೆ ಮುಂತಾದ ಪ್ರತಿಯೊಂದು ಸಂದರ್ಭಗಳಲ್ಲಿ ಜನನ ದಿನಾಂಕವನ್ನು ರುಜುವಾತು ಪಡಿಸಲು ಜನನ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಅದೇ ಪ್ರಕಾರ ಮೃತ ವ್ಯಕ್ತಿಗೆ ಸಂಬಂಧ ಪಟ್ಟ ಯಾವುದೇ ಸ್ವತ್ತು ಅಥವಾ ಆಸ್ತಿ, ಬ್ಯಾಂಕ್ ಡಿಪಾಸಿಟ್, ಇನ್ಸೂರೆನ್ಸ್, ಸೇವಾ ಸೌಲಭ್ಯ, ಪಿಂಚಣಿ ಮುಂತಾದವುಗಳನ್ನು ಪಡೆಯಲು ಮತ್ತು ಆತನಿಗೆ ಸಂಬಂಧಪಟ್ಟ ಆಸ್ತಿ ಅಥವಾ ಸ್ವತ್ತುಗಳ ದಾಖಲೆಗಳನ್ನು ಸಂಬಂಧಪಟ್ಟ ವಾರೀಸುದಾರರ ಹೆಸರಿಗೆ ಬದಲಾಯಿಸುವ ಸಂದರ್ಭದಲ್ಲಿ ಅಂತಹ ಮೃತ ವ್ಯಕ್ತಿಯ ಮರಣ ದಿನಾಂಕವನ್ನು ರುಜುವಾತು ಪಡಿಸಲು ಆತನ ಮರಣ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಈ ಕಾರಣದಿಂದ ಪ್ರತಿಯೊಬ್ಬನ ಜನನ-ಮರಣ ನೋಂದಣಿಯನ್ನು ಕಡ್ಡಾಯಗೊಳಿಸಿ ಸರಕಾರವು ಜನನ ಮರಣಗಳ ನೋಂದಣಿ ಕಾಯ್ದೆ 1969 ಜಾರಿಗೆ ತಂದಿರುತ್ತದೆ.
  2. ಈ ಕಾನೂನು ಇಡೀ ರಾಷ್ಟ್ರಕ್ಕೆ ಅನ್ವಯಿಸಿ ಜಾರಿಯಲ್ಲಿದೆ. ಪ್ರತಿಯೊಂದು ರಾಜ್ಯ ಮಟ್ಟದಲ್ಲಿ ಮುಖ್ಯ ಜನನ ಮತ್ತು ಮರಣ ನೋಂದಣಾಧಿಕಾರಿಯವರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನೋಂದಣಾಧಿಕಾರಿಯವರು, ತಾಲೂಕು ಮಟ್ಟದಲ್ಲಿ ತಾಲೂಕು ನೋಂದಣಾಧಿಕಾರಿಯವರು ಮತ್ತು ಸ್ಥಳೀಯ ಆಡಳಿತ ಸಂಸ್ಥೆ ಅಂದರೆ ಪುರಸಭೆ, ಪಂಚಾಯತಿ ಇವುಗ¼ ವ್ಯಾಪ್ತಿಯಲ್ಲಿ ನೋಂದಣಾಧಿಕಾರಿಯವರು ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಾರೆ.
  3. ಯಾವುದೇ ಜನನ ಅಥವಾ ಮರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಜನನ ಅಥವಾ ಮರಣ ಸಂಭವಿಸಿದ ಸ್ಥಳಕ್ಕೆ ಸಂಬಂಧಪಟ್ಟ ಗ್ರಾಮ ಅಥವಾ ಪುರಸಭೆಗೆ ಸಂಬಂಧಪಟ್ಟ ಜನನ ಮತ್ತು ಮರಣ ನೋಂದಣಾಧಿಕಾರಿಯವರಿಗೆ ಜನನ ಅಥವಾ ಮರಣ ಸಂಭವಿಸಿದ 21 ದಿನಗಳ ಒಳಗಾಗಿ ನಿಗದಿತ ನಮೂನೆಯಲ್ಲಿ ಕೊಡಬೇಕಾಗುತ್ತದೆ. ಈ ರೀತಿಯಾಗಿ ಪಡಕೊಂಡ ಮಾಹಿತಿಯನ್ನು ಸಂಬಂಧಪಟ್ಟ ಜನನ ಮತ್ತು ಮರಣ ನೋಂದಣಾಧಿಕಾರಿಯವರು ಸಂಬಂಧಪಟ್ಟ ರಿಜಿಸ್ತ್ರಿಯಲ್ಲಿ ನಮೂದಿಸಿ ಮಾಹಿತಿದಾರರ ಸಹಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
  4. ಒಂದು ವೇಳೆ 21 ದಿನಗಳ ನಂತರ, ಆದರೆ 30 ದಿನಗಳೊಳಗಾಗಿ, ಆ ಬಗ್ಗೆ ಮಾಹಿತಿಯನ್ನು ಸಲ್ಲಿಸಿದಲ್ಲಿ ಅದನ್ನು ವಿಳಂಬ ಶುಲ್ಕದೊಂದಿಗೆ (ಲೇಟ್ ಫೀ ಯೊಂದಿಗೆ) ಸಲ್ಲಿಸಬೇಕಾಗುತ್ತದೆ. ಹೀಗೆ 30 ದಿನಗಳಲ್ಲಿ ಮಾಹಿತಿಯನ್ನು ಸಲ್ಲಿಸದೇ ನಂತರ, ಆದರೆ ಜನನ ಮರಣ ಸಂಭವಿಸಿದ ಒಂದು ವರ್ಷದೊಳಗಾಗಿ, ಸಲ್ಲಿಸಿದಲ್ಲಿ ಸಂಬಂಧಿಸಿದ ತಹಶೀಲ್ದಾರ್/ಪುರಸಭೆಯ ಮುಖ್ಯಾಧಿಕಾರಿ/ಆಯುಕ್ತ ಇವರ ಪರವಾನಿಗಿಯೊಂದಿಗೆ ಅದನ್ನು ಸ್ವೀಕರಿಸಿ ನೋಂದಣಿ ಮಾಡಲಾಗುತ್ತದೆ. ಒಂದು ವರ್ಷ ಮೀರಿದ ನಂತರವೂ ಜನನ-ಮರಣ ನೋಂದಾಯಿಸದಿದ್ದರೆ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಂಬಂಧಪಟ್ಟ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ (ಜೆ.ಎಂ.ಎಫ್.ಸಿ.ಯವರ) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಆದೇಶ ಪಡೆದುಕೊಂಡಲ್ಲಿ ಜನನ-ಮರಣ ವಿವರಗಳನ್ನು ನೋಂದಾಯಿಸಲು ಅವಕಾಶ ಇರುತ್ತದೆ.
  5. ಜನನ-ಮರಣದ ನೋಂದಣಿಯಾಗುವಾಗ ಯಾವುದೇ ಮಾಹಿತಿ ತಪ್ಪಾಗಿ ದಾಖಲಾದಲ್ಲಿ, ಅದನ್ನು ಸರಿಪಡಿಸುವ ಅಧಿಕಾರವನ್ನು ಸಂಬಂಧಪಟ್ಟ ನೋಂದಣಾಧಿಕಾರಿಯವರು ಹೊಂದಿರುತ್ತಾರೆ.
  6. ಜನನ ದಿನಾಂಕವು ನೋಂದಣಿಯಾದ 12 ತಿಂಗಳುಗಳ ಒಳಗಾಗಿ ನೋಂದಣಾಧಿಕಾರಿಗೆ ಮಗುವಿನ ಹೆಸರನ್ನು ಮೌಖಿಕವಾಗಿಯಾಗಲಿ ಅಥವಾ ಬರವಣಿಗೆಯಲ್ಲಾಗಲೀ ತಿಳಿಸಬೇಕಾಗುತ್ತದೆ. 12 ತಿಂಗಳುಗಳ ನಂತರ, ಆದರೆ 15 ವರ್ಷಗಳೊಳಗಾಗಿ, ಮಗುವಿನ ಹೆಸರನ್ನು ವಿಳಂಬ ಶುಲ್ಕ (ಲೇಟ್ ಫೀ)ದೊಂದಿಗೆ ತಿಳಿಸಿದಲ್ಲಿ ನೋಂದಣಾಧಿಕಾರಿಯು ಆ ಹೆಸರನ್ನು ಸಂಬಂಧಪಟ್ಟ ಜನನ ರಿಜಿಸ್ಟರ್‍ನಲ್ಲಿ ನಮೂದಿಸುವ ಅಧಿಕಾರ ಹೊಂದಿರುತ್ತಾರೆ.
  7. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಂಭವಿಸುವ ಜನನ-ಮರಣಗಳ ದಾಖಲೆಯನ್ನಿಡುವುದು ಜನನ ಮರಣಗಳ ನೋಂದಣಾಧಿಕಾರಿಯ ಜವಾಬ್ದಾರಿ. ಈತ ಯಾವುದೇ ಶುಲ್ಕ ಪಡೆಯದೇ ಜನನ-ಮರಣ ಸಂಬಂಧ ಮಾಹಿತಿಯನ್ನು ನೋಂದಣಿ ಪುಸ್ತಕದಲ್ಲಿ (ರಿಜಿಸ್ಟರ್‍ನಲ್ಲಿ) ನಮೂದಸಿ ಅದರ ಪ್ರತಿಯನ್ನು ಮಾಹಿತಿದಾರನಿಗೆ ಕೊಡತಕ್ಕದ್ದು. ಮಾಹಿತಿಯನ್ನು ಸ್ವೀಕರಿಸಿಲು ನೋಂದಣಾಧಿಕಾರಿ ನಿರಾಕರಿಸಿದಲ್ಲಿ ಅದು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ದಂಡನಾರ್ಹ ಅಪರಾಧವಾಗುತ್ತದೆ.
  8. ಜನನ ಮರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಮೋಸದಿಂದ ಅಥವಾ ಅನುಚಿತವಾಗಿ ರಿಜಿಸ್ಟರ್‍ನಲ್ಲಿ ನಮೂದಿಸಲಾಗಿದ್ದಲ್ಲಿ ಮತ್ತು ಈ ಬಗ್ಗೆ ಸಂಬಂಧಪಟ್ಟ ನೋಂದಣಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಅಂತಹ ಮಾಹಿತಿಯ ನಮೂದನ್ನು ರದ್ದುಗೊಳಿಸಬೇಕಾಗುತ್ತದೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681





























































































































































































































error: Content is protected !!
Scroll to Top