ಕಾರ್ಕಳ : ಕಾಂಗ್ರೆಸ್‌ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಫೋಟಗೊಂಡ ಅಸಮಾಧಾನ

ಕಾರ್ಕಳ : ಗ್ರಾ.ಪಂ. ಚುನಾವಣೆಯಲ್ಲಿ ವಿಜೇತರಾದ ಮತ್ತು ಸ್ಪರ್ಧಿಸಿದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಜ. 19ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ಲಾಕ್‌ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತವಾಯಿತು. ಮಿಯ್ಯಾರು ಗ್ರಾ.ಪಂ. ಸದಸ್ಯ ಡೇನಿಯಲ್‌ ರೇಂಜರ್‌ ಮಾತನಾಡಿ, ಅಭಿನಂದನೆಗೆ ನಾವು ಅರ್ಹರೇ ಅಥವಾ ಅನರ್ಹರೇ ಎಂಬ ಸಂದೇಹವಿದೆ. ಚುನಾವಣೆ ಸಂದರ್ಭ ಯಾವ ನಾಯಕರೂ ಕೂಡ ನಮ್ಮನ್ನು ಕಾಂಗ್ರೆಸ್‌ ಬೆಂಬಲಿತರೆಂದು ಬೆಂಬಲಿಸಿಲ್ಲ. ಆರ್ಥಿಕ ಸಹಾಯ ಬಿಡಿ, ನೈತಿಕ ಬೆಂಬಲವೂ ಮುಖಂಡರಿಂದ ದೊರೆತಿಲ್ಲ. ಚುನಾವಣೆ ಸಂದರ್ಭ ಸಭೆ ನಡೆಸಿಲ್ಲ. ಕಾರ್ಕಳದಲ್ಲಿ ಕಾಂಗ್ರೆಸ್‌ಗೆ ಸೂಕ್ತ ನಾಯಕತ್ವವಿಲ್ಲದಿರುವುದೇ ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಿದ್ದು, ನಾನೊಬ್ಬ ಕಾಂಗ್ರೆಸ್ಸಿಗ ಎನ್ನುವುದಕ್ಕೂ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು ಸಮ್ಮುಖದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಇಡೀ ಸಭಾಂಗಣ ಚಪ್ಪಾಳೆ ತಟ್ಟುವ ಮೂಲಕ ಡೇನಿಯಲ್‌ ಅವರನ್ನು ಸಮರ್ಥಿಸಿತು.


ಪರಿಸ್ಥಿತಿ ನಿಭಾಯಿಸಲು ಮುಂದಾದ ವಿನಯ ಕುಮಾರ್‌ ಸೊರಕೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸದ್ಯದಲ್ಲೇ ಕಾರ್ಕಳಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ನಾಯಕರನ್ನು ಆಯ್ಕೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ತಾನೇ ಖುದ್ದಾಗಿ ಕಾರ್ಕಳದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪಕ್ಷ ಕಟ್ಟುವ ಕಾರ್ಯ ಕೈಗೊಂಡು ಜಿ.ಪಂ., ತಾ.ಪಂ., ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವತ್ತ ಗಮನ ಕೇಂದ್ರೀಕರಿಸಲಿದ್ದೇನೆ ಎಂದರು.
ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಮಧುರಾಜ್‌ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಾಂತಿ ಶೆಟ್ಟಿ, ಕಿಸಾನ್‌ ಘಟಕದ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ, ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ರವಿಶಂಕರ್‌ ಶೇರಿಗಾರ ಉಪಸ್ಥಿತರಿದ್ದರು.























































































































error: Content is protected !!
Scroll to Top