ಕಾರ್ಕಳ : ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದಲ್ಲಿ ಕೃಷಿಕರ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಕುಕ್ಕುಂದೂರು ಗ್ರಾ.ಪಂ. ಮೈದಾನದಲ್ಲಿ ನಡೆದ ಕಾರ್ಲ ಕಜೆ (ಕುಚ್ಚಲಕ್ಕಿ) ಬ್ರಾಂಡ್ ಬಿಡುಗಡೆ ಮತ್ತು ಕೃಷಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ತೋ ನಾಸ್ತಿ ದುರ್ಭಿಕ್ಷಂ ಎಂದು ಹೇಳಿ ಮಾತು ಆರಂಭಿಸಿದ ಸಚಿವರು ಕೊರೊನಾ ಸಂದರ್ಭದಲ್ಲಿ ನೆಮ್ಮದಿಯಾಗಿ ಇದ್ದೇವು ಎಂದಾದರೆ ಅದಕ್ಕೆ ಕಾರಣ ನಮ್ಮ ಕೃಷಿಕರು. ಮುಂದಿನ ದಿನಗಳಲ್ಲಿ ನಾನು ಕೃಷಿಕ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತಹ ವಾತಾವರಣ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಸರಕಾರ ಪೂರಕ ಕ್ರಮ ಕೈಗೊಳ್ಳಲಿದ್ದು, ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲೂ ಮಣ್ಣು ಪರೀಕ್ಷಾ ಕೇಂದ್ರ ತೆರೆಯುವ ಚಿಂತನೆ ಇದೆ ಎಂದರು.

ಕಾರ್ಲ ಕಜೆಗೆ ಸರಕಾರದ ಮಾನ್ಯತೆ
ಕಾರ್ಕಳದಲ್ಲಿ ಬಿಡುಗಡೆಗೊಂಡ ಕುಚ್ಚಲಕ್ಕಿ ಬ್ರಾಂಡ್ಗೆ ಸರಕಾರದಿಂದ ಮಾನ್ಯತೆ ನೀಡಲಾಗುವುದು. ರೈತ ಬೆಳೆದ ಅಕ್ಕಿಯನ್ನು ಬ್ರಾಂಡ್ ಮಾಡುವ ಮೂಲಕ ಶಾಸಕ ವಿ. ಸುನಿಲ್ ರಾಜ್ಯದಲ್ಲೇ ಮಾದರಿ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಬಿ.ಸಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ಸಂಸ್ಕರಣೆಗೆ 10 ಸಾವಿರ ಕೋಟಿ ರೂ.
ಪ್ರಧಾನಿ ನರೇಂದ್ರ ಮೋದಿಯವರು 2023ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ 1 ಲಕ್ಷ ಕೋಟಿ ರೂ. ಕಾದಿರಿಸಿದ್ದಾರೆ. ಅದರಲ್ಲಿ 10 ಸಾವಿರ ಕೋಟಿ ರೂ. ಆಹಾರ ಸಂಸ್ಕರಣೆಗೆ ಮೀಸಲಿಟ್ಟಿರುವುದು ಉತ್ತಮ ವಿಚಾರವೆಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.


ರೈತರ ಕೈ ಬಲಪಡಿಸುವ ಕಾರ್ಯ-ಸುನಿಲ್ ಕುಮಾರ್
ಕಾರ್ಲ ಕಜೆ ಬಿತ್ತನೆ ಬೀಜ ಕೃಷಿ ಇಲಾಖೆಯಿಂದಲೇ ವಿತರಣೆಯಾಗುವ ಕಾರ್ಯ ಸರಕಾರದಿಂದಾಗಬೇಕು. ಕರಾವಳಿ ಭಾಗದ ರೈತರಿಗೂ ಬೆಂಬಲ ಬೆಲ ದೊರೆಯುವಂತಾಗಿ ರೈತರ ಕೈ ಬಲಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕೆಂದು ಶಾಸಕ ವಿ. ಸುನಿಲ್ ಕುಮಾರ್ ಸಚಿವ ಬಿ.ಸಿ.ಪಾಟೀಲ್ ಅವರಲ್ಲಿ ವಿನಂತಿಸಿದರು. ಕಾರ್ಕಳದ ಕುಚ್ಚಲಕ್ಕಿ ಮತ್ತು ಬಿಳಿ ಬೆಂಡೆ ವ್ಯಾಪಕವಾಗಿ ಬೆಳೆದು, ಅದನ್ನ ಬ್ರಾಂಡಿಂಗ್ ಮಾಡುವ ಮೂಲಕ ಬೇಡಿಕೆಯೂ ವೃದ್ಧಿಸಿ ನಮ್ಮೂರಿನ ರೈತರಿಗೆ ಅನುಕೂಲವಾಗಬೇಕೆಂದರು.

ಎತ್ತಿನ ಗಾಡಿಯಲ್ಲಿ ಬಂದಿದ್ದರು
2004ರಲ್ಲಿ ಬಿ.ಸಿ. ಪಾಟೀಲ್ ಅವರು ಮೊದಲ ಬಾರಿಗೆ ಶಾಸಕರಾಗಿ ಎತ್ತಿನ ಗಾಡಿ ಮೂಲಕ ವಿಧಾನ ಸೌಧಕ್ಕೆ ಆಗಮಿಸಿದ್ದರು. ರೈತರ ಕುರಿತು ಅಪಾರ ಕಾಳಜಿ ಹೊಂದಿರುವ ಪಾಟೀಲ್ ಕೃಷಿ ಸಚಿವರಾಗಿ ಕಾರ್ಲ ಕಜೆ ಬ್ರಾಂಡ್ಗೆ ಚಾಲನೆ ನೀಡಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಕೃಷಿ ಮೇಳದ ವಾತಾವರಣ
ಸಭಾಂಗಣದ ಸುತ್ತ ಕೃಷಿ ಕಾರ್ಯಕ್ಕೆ ಸಂಬಂಧಿಸಿದಂತೆ ಯಂತ್ರೋಪಕರಣ, ಬಿತ್ತನೆ ಬೀಜ, ವಿವಿಧ ಬಗೆಯ ತರಕಾರಿ ಪ್ರದರ್ಶನಕ್ಕಿಡಲಾದ ಸುಮಾರು 20ಕ್ಕೂ ಹೆಚ್ಚು ಸ್ಟಾಲ್ಗಳಿದ್ದವು. ವೇದಿಕೆ, ಸಭಾಂಗಣ, ಸ್ಟಾಲ್ ಎಲ್ಲವೂ ಅಚ್ಚುಕಟ್ಟಾಗಿದ್ದು, ಸ್ವಯಂ ಸೇವಕರು ಕೃಷಿ ಮೇಳದ ವಾತಾವರಣವನ್ನೇ ನಿರ್ಮಿಸಿದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಮಂದಿ ಕಜೆ ಅಕ್ಕಿಯನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ವೇದಿಕೆಯಲ್ಲಿ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಕಳ ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಹೆಬ್ರಿ ತಾ.ಪಂ. ಅಧ್ಯಕ್ಷ ರಮೇಶ್ ಪೂಜಾರಿ, ಜಿ.ಪಂ. ಸದಸ್ಯರಾದ ಸುಮಿತ್ ಶೆಟ್ಟಿ, ಉದಯ ಎಸ್. ಕೋಟ್ಯಾನ್, ರೇಶ್ಮಾ ಉದಯ ಶೆಟ್ಟಿ, ಜ್ಯೋತಿ ಹರೀಶ್, ದಿವ್ಯಾಶ್ರೀ ಅಮೀನ್, ಭಾ.ಕಿ.ಸಂ. ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್, ತೋಟಗಾರಿಕೆ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜ ನಕ್ರೆ, ಎಪಿಎಂಸಿ ಅಧ್ಯಕ್ಷ ಮೋಹನ್ದಾಸ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪೂರ್ಣಿಮಾ, ಭಾ.ಕಿ.ಸಂ.ತಾಲೂಕು ಅಧ್ಯಕ್ಷ ಉಮಾನಾಥ ರಾನಡೆ, ಶಿವಮೊಗ್ಗ ತೋಟಗಾರಿಕೆ ವಿ.ವಿ. ಉಪಕುಲಪತಿ ಡಾ.ಎಂ.ಕೆ. ನಾಯ್ಕ್, ಜಿ.ಪಂ. ಸಿಇಒ ನವೀನ್ ಭಟ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಇಒ ಡಾ. ಮೇಜರ್ ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಸ್ವಾಗತಿಸಿ, ಉದಯ ಕುಮಾರ್ ಹೆಗ್ಡೆ ಕಾಂತರಗೋಳಿ ಕಾರ್ಯಕ್ರಮ ನಿರೂಪಿಸಿದರು. ತೋಟಗಾರಿಕೆ ಇಲಾಖೆಯ ಶ್ರೀನಿವಾಸ್ ಬಿ.ವಿ. ವಂದಿಸಿದರು.





























































