ಅಕ್ಟೋಬರ್‌ನಲ್ಲಿ ಆಗುತ್ತಾ ಸಂಪುಟ ವಿಸ್ತರಣೆ?

ಬೆಂಗಳೂರು,ಸೆ. 9: ರಾಜ್ಯ ಸಂಪುಟ ವಿಸ್ತರಣೆ ಎನ್ನುವುದು ಸದ್ಯಕ್ಕೆ ಮುಗಿಯುವ ಅಧ್ಯಾಯದಂತೆ ಕಾಣಿಸುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರು ಸದ್ಯಕ್ಕೆ ಸಂಪುಟ ವಿಸ್ತರಿಸುವುದಿಲ್ಲ ಎಂದು ಹೇಳಿದ್ದರೂ ಆಕಾಂಕ್ಷಿಗಳ ನಿರೀಕ್ಷೆ ಮಾತ್ರ ಮುಗಿದಿಲ್ಲ. ಇದೀಗ ಅಕ್ಟೋಬರ್ ತಿಂಗಳಿನಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.  ಎಂಎಲ್ ಸಿಗಳಾದ ಆರ್.ಶಂಕರ್, ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಅವರಿಗೆ ನೀಡಿರುವ ಮಾತನ್ನು ಉಳಿಸಿಕೊಳ್ಳುವ ಸಲುವಾಗಿಯಾದರೂ ಯಡಿಯೂರಪ್ಪ ಸಂಪುಟ ವಿಸ್ತರಿಸಲೇ ಬೇಕು. ಹೀಗಾಗಿ ಅಕ್ಟೋಬರ್‌ ಅಂತ್ಯಕ್ಕಾಗುವಾಗ ವಿಸ್ತರಣೆ ಆಗಬಹುದು ಎನ್ನಲಾಗುತ್ತಿದೆ.

ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣಾರಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನ ಬಂಡಾಯ ಶಾಸಕರಿಗೆ ಯಡಿಯೂರಪ್ಪನವರು ಕೆಲವು ವಾಗ್ದಾನಗಳನ್ನು ನೀಡಿದ್ದರು. ಇವುಗಳನ್ನು ಈಡೇರಿಸುವ ಸಲುವಾಗಿ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ಆಕಾಂಕ್ಷಿಗಳ ವಾದ.

ಈ ತಿಂಗಳ  21ರಿಂದ 30 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ, ಸದನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

ಅಧಿವೇಶನದ ನಂತರ ದಿಲ್ಲಿಗೆ ತೆರಳಿ ವರಿಷ್ಠರನ್ನು ಕಂಡು ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಯಿದೆ. ಎಲ್ಲ ಸರಿಯಾದರೆ ಅಕ್ಟೋಬರ್‌ 5ರ ಬಳಿಕ ಸಂಪುಟ ವಿಸ್ತರಣೆಯಾಗಬಹುದು ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿ ಬಂದಿದೆ.

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬೆಂಗಳೂರಿಗೆ ಆಗಮಿಸಿದ್ದು, ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದರು.  ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಾಲೋಚಿಸಿದ್ದರು. 

90 ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗಳು ಖಾಲಿಯಿದ್ದು 400-500 ಮಂದಿ ಆಕಾಂಕ್ಷಿಗಳಿದ್ದಾರೆ, ಪಕ್ಷವೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿರುವುದರಿಂದ ಸರ್ಕಾರ ಯಾವುದೇ ನೇಮಕಾತಿ ಮಾಡಲು ಏನೂ ಉಳಿದಿಲ್ಲ, ಶೇ. 50  ರಷ್ಟು ಸ್ಥಾನಗಳನ್ನು ಭರ್ತಿ ಮಾಡಲು ತನ್ನ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಸರ್ಕಾರ ಪಕ್ಷವನ್ನು ಒತ್ತಾಯಿಸಿದೆ.































































































error: Content is protected !!
Scroll to Top