ಲಡಾಖ್, ಆ.31 :ಲಡಾಖ್‌ನ ಪಾಂಗೊಂಗ್ ಸರೋವರದ ಆಸುಪಾಸಿನಲ್ಲಿ ಚೀನ ಮತ್ತೆ ಗಡಿ ತಂಟೆಗೆ ಬಂದಿದೆ. ಯಥಾಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಚೀನ ನಡೆಸುತ್ತಿದ್ದ ನಿಗೂಢ ಸೇನಾ ಚಟುವಟಿಕೆಗಳನ್ನು ಭಾರತೀಯ ಸೇನೆ ವೀಫಲಗೊಳಿಸಿದೆ.
ಆ.29ರಂದು ತಡರಾತ್ರಿ ಈ ಘಟನೆ ಸಂಭವಿಸಿದೆ. ನಡುರಾತ್ರಿ ಚೀನದ ಸೇನೆ ಹಿಂದಿನ ಮಾತುಕತೆ ವೇಳೆ ತೀರ್ಮಾನಿಸಲಾಗಿದ್ದ ವಾಸ್ತವ ಗಡಿ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸಲು ಮಂದಾಗಿದೆ.ಭಾರತೀಯ ಸೇನೆ ಈ ಪ್ರಯತ್ನವನ್ನು ತಡೆದು ಚೀನದ ಸೇನೆಯನ್ನು ಹಿಮ್ಮೆಟ್ಟಿಸಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಜೂ.15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನ ಸೈನಿಕರ ನಡುವೆ ಸಂಘರ್ಷ ನಡೆದು 20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಗಡಿಯಲ್ಲಿ ಬಿಗುವಿನ ಪರಿಸ್ಥಿಯಿದೆ. ಆದರೆ ಚೀನ ಆಗಾಗ ಗಡಿಯಲ್ಲಿ ಕಿರಿಕ್ ಮಾಡುತ್ತಾ ಶಾಂತಿ ಸ್ಥಾಪನೆ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದೆ.

























