ಇಂದಿನ ಐಕಾನ್ – ಹಾಕಿಯ ಗಾರುಡಿಗ ಮೇಜರ್ ಧ್ಯಾನಚಂದ್

1

         ಕ್ರಿಕೆಟಿನ ಭರಾಟೆಯಲ್ಲಿ  ಹಾಕಿಯು ಭಾರತದ  ರಾಷ್ಟ್ರೀಯ ಕ್ರೀಡೆ ಎನ್ನುವುದು ಹೆಚ್ಚಿನ ಭಾರತೀಯರಿಗೆ ಮರೆತು ಹೋಗಿದೆ! ಭಾರತ ಒಲಿಂಪಿಕ್ಸ್ ಕೂಟದಲ್ಲಿ ಎಂಟು ಬಾರಿ ಹಾಕಿ ಚಿನ್ನದ ಪದಕಗಳನ್ನು ಪಡೆದಿದ್ದು, ಜಗತ್ತಿನ ಬೇರೆ ಯಾವ ರಾಷ್ಟ್ರ ಕೂಡ ಈ ಸಾಧನೆ ಮಾಡಿಲ್ಲ ಎನ್ನುವುದು ನಮಗೆ ಗೊತ್ತಿರುವ ಹಾಗಿಲ್ಲ! 1975ರ ಹಾಕಿ ವಿಶ್ವಕಪ್ಪನ್ನು ಭಾರತ ಗೆದ್ದಿದ್ದು  ಹಲವರಿಗೆ ಗೊತ್ತಿಲ್ಲ. ಅಂತಹ ಕ್ರೀಡೆಯನ್ನು ವಿಶ್ವಮಟ್ಟಕ್ಕೆ ಬೆಳೆಸಿದ, ಕೇವಲ ಭಾರತದ ಮಾತ್ರವಲ್ಲ ಇಡೀ ಜಗತ್ತಿನ ಅತ್ಯುತ್ತಮ ಹಾಕಿ ಆಟಗಾರ ಎಂದು ಕರೆಸಿಕೊಂಡ ಮೇಜರ್ ಧ್ಯಾನಚಂದ್ ಅವರ ಹುಟ್ಟು ಹಬ್ಬ ಇಂದು! ರಾಷ್ಟ್ರೀಯ ಕ್ರೀಡಾ ದಿನ! ಇಂದು ಅವರನ್ನು ನಾವು ನೆನಪಿಸಿಕೊಳ್ಳುವುದು ಅಗತ್ಯ ಎಂದು ನನ್ನ ಭಾವನೆ.

        ಅವರು ಹುಟ್ಟಿದ್ದು ಪ್ರಯಾಗದಲ್ಲಿ. (ಆಗಸ್ಟ್ 29,1905). ಅವರ ತಂದೆ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಹವಾಲ್ದಾರ್ ಆಗಿದ್ದರು. ಆದ್ದರಿಂದ ಮಗನಿಗೂ ಸೇನೆಯದ್ದೆ ಸೆಳೆತ. ಶಾಲೆಯನ್ನು ಅರ್ಧಕ್ಕೇ ಬಿಟ್ಟು ಹದಿನಾರನೆಯ ವಯಸ್ಸಿಗೆ ಸೇನೆಗೆ ಸೇರಿದ್ದರು. ಅಲ್ಲಿ ಟೈಮ್ ಪಾಸ್ ಮಾಡಲು ಹಾಕಿ ಆಡುತ್ತಿದ್ದರು. ಆದರೆ ಅವರ ಆಟದಲ್ಲಿ ಯಾವುದೋ ಒಂದು ವಿಶೇಷತೆ ಇರುವುದನ್ನು ಸುಬೇದಾರ ಮೇಜರ್ ಭೋಲೆ ಎಂಬವರು ಗಮನಿಸಿ ತರಬೇತಿ  ನೀಡಿದರು. ಪಂಕಜ ಗುಪ್ತಾ ಎಂಬ ಮಹಾ ಕೋಚ್ ಅವರ ಒಳಗೆ ಹುದುಗಿದ್ದ ಅದ್ಭುತ ಹಾಕಿ ಪ್ರತಿಭೆಯನ್ನು ಒರೆಗೆ ಹಚ್ಚಿ ಬೆಳಕಿಗೆ ತಂದರು. ಧ್ಯಾನ್ ಸಿಂಘ್ ಎಂಬ ಹೆಸರನ್ನು ಧ್ಯಾನ್ ಚಂದ್ ಎಂದು  ಬದಲಾಯಿಸಿದ್ದು ಅವರೇ! ನೀನು ಚಂದ್ರನಂತೆ ಬೆಳಗುವುದು ಖಂಡಿತ ಎಂದವರು ಯಾವಾಗಲೂ ಹೇಳುತ್ತಿದ್ದರು!

      ಧ್ಯಾನಚಂದ್ ಅವರು ಮೂರು ಒಲಿಂಪಿಕ್ಸ್ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು.(1928ರ  ಆಮಸ್ಟರ್‌ಡ್ಯಾಂ, 1932ರ ಲಾಸ್ ಏಂಜಲೀಸ್, 1936ರ ಬರ್ಲಿನ್). ಈ ಮೂರೂ ಕೂಟಗಳಲ್ಲಿ ಭಾರತ ಚಿನ್ನದ ಪದಕಗಳನ್ನು ಗೆದ್ದಿತು! ಈ ಮೂರು ಕೂಟಗಳಲ್ಲಿ ಭಾರತ ಆಡಿದ್ದ 12 ಪಂದ್ಯಗಳಲ್ಲಿ 33 ಗೋಲುಗಳನ್ನು ಧ್ಯಾನಚಂದ್ ಒಬ್ಬರೇ ಹೊಡೆದಿದ್ದರು!

“ಏನೋ ಹುಡುಗ, ನಾನು ಕ್ರಿಕೆಟ್ ಪಂದ್ಯದಲ್ಲಿ ರನ್ ಹೊಡೆಯುವಷ್ಟೇ ಸಲೀಸಾಗಿ ಗೋಲ್ ಹೋಡೆಯುತ್ತೀಯಲ್ಲ” ಎಂದು ಕ್ರಿಕೆಟ್ ದಂತಕಥೆ ಡೊನಾಲ್ಡ್ ಬ್ರಾಡ್ಮನ್ ಅವರ ಬಗ್ಗೆ  ಹೇಳಿದ್ದು ಎಂತಹ ದೊಡ್ಡ ಪ್ರಶಸ್ತಿ!

        ಬರ್ಲಿನ್ ಒಲಿಂಪಿಕ್ಸ್ ಪಂದ್ಯದಲ್ಲಿ ಅವರ ಆಟವನ್ನು ನೋಡಿದ ಸರ್ವಾಧಿಕಾರಿ ಹಿಟ್ಲರ್ ವಿಸ್ಮಯಪಟ್ಟು ಹತ್ತಿರ ಕರೆದು ಮೂರು ಆಮಿಷಗಳನ್ನು ನೀಡಿದ್ದರು. ನಿಮಗೆ ಮೇಜರ್ ಹುದ್ದೆ ಕೊಡುತ್ತೇನೆ, ಜರ್ಮನಿ ನಾಗರಿಕತ್ವ ನೀಡುತ್ತೇನೆ, ಕರ್ನಲ್ ಗೌರವ ಕೊಡುತ್ತೇನೆ, ನೀವು ಜರ್ಮನಿಯ ಪರವಾಗಿ ಆಡಿ ಎಂದು ಹೇಳಿದ್ದ! ಆದರೆ ಹಿಟ್ಲರ್ ನೀಡಿದ ಆಮಿಷಗಳನ್ನು ನಯವಾಗಿ ನಿರಾಕರಿಸಿ ಧ್ಯಾನಚಂದ್ ಭಾರತದಲ್ಲೇ ಉಳಿದದ್ದು ಎಂತಹ ದೇಶಭಕ್ತಿ!

       ಅವರು ಹಾಕಿ ಚೆಂಡನ್ನು ಡ್ರಿಬಲ್ ಮಾಡಿಕೊಂಡು ಹೋಗುತ್ತಿದ್ದ  ವೇಗವನ್ನು ನೋಡಿ ನೆದರ್ಲ್ಯಾಂಡ್ಸ್ ಹಾಕಿ  ಅಧಿಕಾರಿಗಳಿಗೆ ಅಚ್ಚರಿ ಮೂಡಿತ್ತು. ಅವರು ಧ್ಯಾನಚಂದ್ ಹಾಕಿ ಸ್ಟಿಕ್ಕಲ್ಲಿ ಮ್ಯಾಗ್ನೆಟ್ ಇದೆ ಎಂದು ವಾದಕ್ಕೆ ಕೂತರು. ಒಲಿಂಪಿಕ್ಸ್ ಅಧಿಕಾರಿಗಳು ಎಲ್ಲರ ಸಮ್ಮುಖದಲ್ಲಿ ಅವರ ಸ್ಟಿಕ್ಕನ್ನು ಮುರಿದು ಮ್ಯಾಗ್ನೆಟ್ ಇಲ್ಲ ಎಂದು ಜಗತ್ತಿಗೆ ಸಾರಿದರು! ಅಲ್ಲಿ ಕೂಡಾ ಧ್ಯಾನಚಂದ್ ಗೆದ್ದಿದ್ದರು!

     ಅವರು ಭಾರತವನ್ನು 21 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಅದರಲ್ಲಿ 18 ಪಂದ್ಯಗಳನ್ನು ಭಾರತ ಗೆದ್ದಿತು. ಒಟ್ಟು ದಾಖಲು ಆದ ಗೋಲುಗಳ ಸಂಖ್ಯೆ 192. ಅದರಲ್ಲಿ 100 ಗೋಲುಗಳನ್ನು  ಕೇವಲ ಧ್ಯಾನಚಂದ್ ಒಬ್ಬರೇ  ಬಾರಿಸಿದ್ದರು! ಒಟ್ಟು 400ಕ್ಕಿಂತ ಅಧಿಕ ಅಂತಾರಾಷ್ಟ್ರೀಯ ಮಟ್ಟದ ಗೋಲುಗಳು ಇಂದು ಅವರ ಖಾತೆಯಲ್ಲಿ ಇವೆ!  

       ಫುಟ್ಬಾಲಿಗೆ ಪೀಲೆ, ಕ್ರಿಕೆಟಿಗೆ ಬ್ರಾಡ್ಮನ್, ಹಾಕಿಗೆ ಧ್ಯಾನಚಂದ್ ಅನ್ನುವುದು ಆ ಕಾಲದ  ಜನಪ್ರಿಯ ಸಮೀಕರಣವೆ ಆಗಿತ್ತು! ಅದು ನೂರಕ್ಕೆ ನೂರರಷ್ಟು ನಿಜವೂ ಆಗಿತ್ತು. ಧ್ಯಾನಚಂದ್ ಅವರ ಆಳೆತ್ತರದ  ಪ್ರತಿಮೆಯನ್ನು ಆಸ್ಟ್ರಿಯಾದ ವಿಯೆನ್ನಾ ನಗರದಲ್ಲಿ ಅಲ್ಲಿನ ಸರಕಾರವು ಸ್ಥಾಪಿಸಿ ಗೌರವ ನೀಡಿತ್ತು! ಭಾರತ ಸರಕಾರವು ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿತು(ಅವರು ಭಾರತರತ್ನಕ್ಕೆ ಅತ್ಯಂತ ಅರ್ಹರು ಎನ್ನುವುದು ನನ್ನ ಅಭಿಪ್ರಾಯ). ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಅವರ ಹೆಸರನ್ನು ಭಾರತ ಸರಕಾರವು ಇಟ್ಟಿತು. ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಭಾರತವು ಆಚರಿಸಿಕೊಂಡು ಬರುತ್ತಿದೆ.

ಧ್ಯಾನಚಂದ್ ಅವರು ಮೇಜರ್ ಹುದ್ದೆಗೆ ಏರಿ ಭಾರತದ ಸೇನೆಯಿಂದ ನಿವೃತ್ತಿ ಆದರು. ಅವರ ಆತ್ಮಚರಿತ್ರೆಯ ಪುಸ್ತಕ GOAL ತುಂಬಾ ಚೆನ್ನಾಗಿ ಮೂಡಿಬಂದಿದೆ. 1979ರ  ಡಿಸೆಂಬರ್ 3ರಂದು ಅವರು ನಮ್ಮನ್ನು ಅಗಲಿದರು. ಅವರು ನಿಜವಾದ ಅರ್ಥದಲ್ಲಿ ಭಾರತ ರತ್ನವೆ ಆಗಿದ್ದಾರೆ!

ರಾಜೇಂದ್ರ ಭಟ್ ಕೆ.---
Previous articleಪಲಿಮಾರು ಲಿಲ್ಲಿ ರಾಮದಾಸ್ ಪ್ರಭು ನಿಧನ.
Next articleಮತ್ತೆ ಮೂವರು ಉಗ್ರರು ಬಲಿ : ಓರ್ವ ಯೋಧ ಹುತಾತ್ಮ

1 COMMENT

LEAVE A REPLY

Please enter your comment!
Please enter your name here