
ಬೆಂಗಳೂರು, ಆ. 19 : ಮಹಾರಾಷ್ಟ್ರದಲ್ಲಿ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸೇರಿ ಹಲವು ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, 2019ರ ಪ್ರವಾಹ ಮರುಕಳಿಸುವ ಭೀತಿ ಶುರುವಾಗಿದೆ.
ಮಹಾರಾಷ್ಟ್ರ ಕೊಯ್ನಾ ಸೇರಿದಂತೆ ಕೆಲವು ಅಣೆಕಟ್ಟುಗಳಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕೃಷ್ಣಾ ನದಿಗೆ 1.93 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಗ ಜಿಲ್ಲೆಗಳಲ್ಲಿ ನದಿ ನೀರಿನ ಪ್ರಮಾಣ ಅಪಾಯಮಟ್ಟದಲ್ಲಿದ್ದು, 50ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಕೃಷಿ ಭೂಮಿ, 30ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಅತಿ ಹೆಚ್ಚು ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಷ್ಟು ಮಳೆಯಾದರೆ, ಗೋಕಾಕ ಪಟ್ಟಣವೂ ಜಲಾವೃತವಾಗುವ ಅಪಾಯ ಎದುರಾಗಿದೆ.
ಯಾದಗಿರಿ ಜಿಲ್ಲೆಯ ಬಸವ ಸಾಗರ ಅಣೆಕಟ್ಟಿನಿಂದ 2.55ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಹೆಚ್ಚಿದೆ. ಮಲಪ್ರಭಾ ಅಚ್ಚುಕಟ್ಟಿನಲ್ಲಿ ಮಳೆ ಕಡಿಮೆಯಾದ ಕಾರಣ ಗದಗ ಜಿಲ್ಲೆಯಲ್ಲಿ ಪ್ರವಾಹ ತುಸು ಇಳಿಕೆಯಾಗಿದೆ. ತುಂಗಭದ್ರಾ ಡ್ಯಾಂನಿಂದ 63 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವೃಂದಾವನ ಗಡ್ಡೆ ಜಲಾವೃತವಾಗಿದೆ. ಪುರಂದರದಾಸರ ಮಂಟಪಕ್ಕೂ ನೀರು ನುಗ್ಗಿದೆ.
ಇದೇ ವೇಳೆ ಮಲೆನಾಡು ಕರಾವಳಿ ಮತ್ತು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತಗ್ಗಿದೆ.