ಬೆಂಗಳೂರು : ರಾಜಧಾನಿ ಇಂದು ಲಾಕ್‌ಡೌನ್ ಮುಕ್ತಾಯವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನ ಸಂಚಾರವೂ ಎಂದಿನಂತೆ ಆರಂಭವಾಗಿದೆ.
ಬೆಂಗಳೂರಿನಲ್ಲೇ ಅತಿಹೆಚ್ಚು ಜನ ಸಂದಣಿ ಹೊಂದಿರುವ ಸ್ಥಳ ಎಂದರೆ ಕೆ.ಆರ್. ಮಾರ್ಕೆಟ್. ಲಾಕ್‌ಡೌನ್ ನಿಮಿತ್ತ ಈ ಭಾಗದಲ್ಲಿ ಕಳೆದ ಒಂದು ವಾರಗಳಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಪೊಲೀಸರು ಇಂದು ಬೆಳಗ್ಗೆ ವಾಹನ ಸಂಚಾರ ಮತ್ತು ಮಾರುಕಟ್ಟೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಇನ್ನೂ ನಗರದ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಹಜ ರೀತಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಟೋಲ್‌ಗೇಟ್ ಗಳಲ್ಲಿ ಯಥಾವತ್ತಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಎಲ್ಲಾ ಫ್ಲೈಓವರ್‌ಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಬಿಎಂಟಿಸಿ ಬಸ್ ನಿಲ್ದಾಣ ಖಾಲಿ ಖಾಲಿ
ಇಂದು ಲಾಕ್‌ಡೌನ್ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ ಏರ್‌ಪೋರ್ಟ್ ಬಸ್‌ಗಳನ್ನು ಹೊರತುಪಡಿಸಿ ಬೇರೆ ಯಾವ ಬಸ್‌ಗಳು ಬಸ್ ನಿಲ್ದಾಣಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಇಡೀ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಕೆಲ ಪ್ರಯಾಣಿಕರು ಬಸ್ ಬಾರದ ಕಾರಣ ಕೊನೆಗೆ ಆಟೋದಲ್ಲಿ ತೆರಳಿದರು.