ಕಾರ್ಕಳ : ಮುಸ್ಲಿಂ ಕುಟುಂಬವೊಂದು ಆರಾಧಿಸಿಕೊಂಡು ಬಂದಿರುವ ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ನಡೆದ ಹಲ್ಲೆ ಪ್ರಕರಣ ಸಂಬಂಧ ರಿಯಾಜ್ ಅವರಿಂದಲೂ ಪ್ರತಿದೂರು ದಾಖಲಾಗಿದೆ. ಎ. 3ರಂದು ದೂಪದಕಟ್ಟೆ ಜಿಡಿ ಬೆಟ್ಟುಮನೆ ವಿಶ್ವನಾಥ್ ಎಂಬವರಿಗೆ ಕುಕ್ಕಾಜೆ ನಿವಾಸಿ ರಿಯಾಜ್ ಎಂಬಾತ ಸ್ಕೂಟರ್ ತಡೆದು ಹಲ್ಲೆ ನಡೆಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಣ್ಣು ಕಾಣದ ಮಗ ಪೌಜನ್‌ನನ್ನು ವಾಕಿಂಗ್ ಮಾಡಿಸುವಾಗ ಜಹೀರ್ ಎಂಬಾತ ಬುಲೆಟ್‌ನಲ್ಲಿ ಬಂದು ತಡೆದು ನಿಲ್ಲಿಸಿ ನೀನು ಕಣ್ಣು ಕಾಣದ ನಿನ್ನ ಮಗನನ್ನು ರೋಡ್‌ನಲ್ಲಿ ಯಾಕೆ ಬಿಟ್ಟಿರುವೇ ? ಎಂದು ಬೈಯ್ದು ಹಲ್ಲೆಗೈದಿದ್ದಾನೆ. ಅಲ್ಲದೆ ಈ ಸಂದರ್ಭ ಸ್ಥಳಕ್ಕೆ ಬಂದ ನಜೀರ್, ಇಮ್ತಿಯಾಜ್, ಹನೀಫ್, ವಿಶ್ವನಾಥ ಇರ್ಷಾದ್ ಹಾಗೂ ಇತರ ಸುಮಾರು 20 ಮಂದಿ ರಿಕ್ಷಾ ಮತ್ತು ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ನಮ್ಮ ಕಾಂಪೌಂಡ್‌ನಲ್ಲಿ ಹಾಕಿದ್ದ ಅಸ್ತ್ರ ನ್ಯೂಸ್ ಎಂಬ ಜಾಹೀರಾತು ಫಲಕವನ್ನು ಧ್ವಂಸ ಮಾಡಿದ್ದಲ್ಲದೇ ಪುತ್ರರಾದ ರಿಹಾನ್, ರಿಮಾನ್, ರಿಫಾನ್ ಮತ್ತು ಪೌಜನ್ ಅವರಿಗೆ ಮರದ ಕೋಲಿನಿಂದ ಹಾಗೂ ಕಲ್ಲಿನಿಂದ ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ರಿಯಾಜ್ ಕಾರ್ಕಳ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.




























































