ಹೈವೋಲ್ಟೇಜ್ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿರುವ ಕ್ರಿಕೆಟ್ ಪ್ರೇಮಿಗಳು
ಕೊಲಂಗೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಕೂಟದ ಇಂದಿನ ಪಂದ್ಯದಲ್ಲಿ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಈ ಹೈವೋಲ್ಟೇಜ್ ಪಂದ್ಯವನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಭಾರಿ ಜೋಶ್‌ನಲ್ಲಿದ್ದಾರೆ. ಆದರೆ ಈ ಜಿದ್ದಾಜಿದ್ದಿ ಕ್ರಿಕೆಟ್ ಕದನಕ್ಕೆ ಮಳೆ ಭೀತಿಯೂ ಇದೆ. ಸಂಜೆ 3ಕ್ಕೆ ಪಂದ್ಯ ಆರಂಭವಾಗಲಿದೆ.
ಪಂದ್ಯ ಮಳೆಯಿಂದ ರದ್ದಾದರೆ ಎರಡೂ ತಂಡಗಳಿಗೆ ಅಂಕಗಳನ್ನು ಹಂಚಲಾಗುವುದು. ಆಗ ಪಾಕಿಸ್ಥಾನ ಸೂಪರ್-4 ಹಂತ ತಲುಪಲಿದೆ. ಬಾಬರ್ ಪಡೆ ಮೊದಲ ಪಂದ್ಯದಲ್ಲಿ ನೇಪಾಲವನ್ನು 238 ರನ್ನುಗಳಿಂದ ಮಣಿಸಿತ್ತು. ಭಾರತ ಸೋಮವಾರದ ಪಂದ್ಯದಲ್ಲಿ ದುರ್ಬಲ ನೇಪಾಲವನ್ನು ಎದುರಿಸಲಿದೆ.
ಭಾರತದ ಯಶಸ್ಸು ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಅವಲಂಬಿಸಿದೆ. ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಇಶಾನ್ ಕಿಶನ್ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠವಾಗಿಯೇ ಗೋಚರಿಸುತ್ತಿದೆ. ಆದರೆ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ಅವರ ಮೊದಲ ಸ್ಪೆಲ್ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲುವುದು ಮುಖ್ಯ. ಕನಿಷ್ಠ ಮೊದಲ 10 ಓವರ್‌ಗಳಲ್ಲಿ ನಮ್ಮ ಆರಂಭಿಕರು ಕ್ರೀಸ್ ಆಕ್ರಮಿಸಿಕೊಂಡದ್ದೇ ಆದಲ್ಲಿ ಉತ್ತಮ ಮೊತ್ತ ಪೇರಿಸಬಹುದು. ಅಥವಾ ಚೇಸಿಂಗ್‌ನಲ್ಲಿ ಮೇಲುಗೈ ಸಾಧಿಸಬಹುದು.
ಭಾರತೀಯರಿಗೆ ಶದಾಬ್ ಖಾನ್ ಅವರ ಲೆಗ್‌ಸ್ಪಿನ್ ಸವಾಲು ಇದೆ. ಈ ವರ್ಷದ 8 ಪಂದ್ಯಗಳಿಂದ 11 ವಿಕೆಟ್ ಕಿತ್ತಿರುವ ಶದಾಬ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ.
ಭಾರತದ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಬೇಕಾಗುತ್ತದೆ. ಕುಲದೀಪ್ ಅವರ ಚೈನಾಮನ್ ಎಸೆತಗಳು ಪಲ್ಲೆಕೆಲೆ ಟ್ರ್ಯಾಕ್ ಮೇಲೆ ಹೆಚ್ಚು ಘಾತಕವಾಗಲಿವೆ ಎಂಬುದೊಂದು ನಿರೀಕ್ಷೆ. ಕುಲದೀಪ್ ಈ ವರ್ಷದ 11 ಪಂದ್ಯಗಳಿಂದ 22 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ಹಾರ್ದಿಕ್ ಪಾಂಡ್ಯ ಜಬರ್ದಸ್ತ್ ಪ್ರದರ್ಶನ ನೀಡಬೇಕಾದುದು ಮುಖ್ಯ.