ಮಹಡಿಯಿಂದ ಮಗು ಎಸೆದು ಕೊಂದ ತಾಯಿ

ಬೆಂಗಳೂರು : ತಾಯಿಯೋರ್ವಳು ತನ್ನ ಮಗುವನ್ನೇ ಮಹಡಿಯಿಂದ ಕೆಳಕ್ಕೆಸೆದು ಕೊಂದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಸಂಪಂಗಿ ರಾಮನಗರದಲ್ಲಿ ನಡೆದಿದೆ. ಸುಷ್ಮಾ ಎಂಬವಳೇ ತಾನು ಹೆತ್ತ 4 ವರ್ಷದ ಮಗುವನ್ನು ಅದ್ವಿತ್‌ ಅಪಾರ್ಟ್‌ಮೆಂಟ್‌ನ 4ನೇ ಮಹಡಿ ಮೇಲಿನಿಂದ ಕೆಳಗೆ ತಳ್ಳಿದಾಕೆ. ಮಗು ಕೆಳಗೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮಗುವನ್ನು ಎಸೆದ ನಂತರ ತಾಯಿ ಸುಷ್ಮಾ ಚೀರಿಕೊಂಡಿದ್ದಾಳೆ. ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆ ಹೊತ್ತಿಗೆ ಅಕ್ಕಪಕ್ಕದಲ್ಲಿದ್ದವರು ನೋಡಿ ಈಕೆಯ ರಕ್ಷಣೆ ಮಾಡಿದ್ದಾರೆ. ಮಗು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. 5 ವರ್ಷವಾದರೂ ಮಾತು ಬರುತ್ತಿರಲಿಲ್ಲ ಎಂಬ ಕಾರಣಕ್ಕೆ ತಾಯಿ ಸುಷ್ಮಾ ನೊಂದು ಈ ಕೃತ್ಯವೆಸಗಿದ್ದಾಳೆ ಎನ್ನಲಾಗುತ್ತಿದೆ. ಸುಷ್ಮಾ ದಂತ ವೈದ್ಯೆಯಾಗಿ ತರಬೇತಿ ಪಡೆಯುತ್ತಿದ್ದು, ತನ್ನ ವೃತ್ತಿಜೀವನ ಮಗುವಿನಿಂದಾಗಿ ಹಾಳಾಗುತ್ತಿದೆ ಎಂದು ಭಾವಿಸಿ ಸಿಟ್ಟಿನಲ್ಲಿ ಈ ಕೃತ್ಯವೆಸಗಿರಬಹುದು ಎಂದೂ ಹೇಳಲಾಗುತ್ತಿದೆ. ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಈಕೆಯ ಪತಿ ಕಿರಣ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಮೂರು ತಿಂಗಳ ಹಿಂದೆ ಸುಷ್ಮಾ ಮಗುವನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳು. ಅಂದು ತಂದೆ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಸುಷ್ಮಾ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!
Scroll to Top