60 ಬಾರಿ ಇರಿದು ಗುರೂಜಿ ಕೊಲೆ

*ಫೇಸ್‌ಬುಕ್‌ ಪೋಸ್ಟ್‌ನಲ್ಲಿತ್ತೇ ಕೊಲೆಯ ಸುಳಿವು
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವಂತೆ ಕೊಲೆಗೆ ಸಂಬಂಧಿಸಿದ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿವೆ. ಕೊಲೆಗೆ ಸಾಕಷ್ಟು ತಯಾರಿ ನಡೆಸಲಾಗಿತ್ತು ಎಂಬ ಅಂಶವೀಗ ಚರ್ಚೆಗೊಳಗಾಗಿದೆ. ಇದಕ್ಕೆ ಪುಷ್ಟಿ ನೀಡಿರುವುದು ಕೊಲೆ ಮಾಡುವ ಐದು ದಿನದ ಮೊದಲು ಆರೋಪಿ ಮಹಾಂತೇಶ್‌ ಶಿರೂರ್ ಹಾಕಿದ ಒಂದು ಫೇಸ್‌ಬುಕ್‌ ಪೋಸ್ಟ್‌.
ಸಂಭವಾಮಿ ಯುಗೇ.. ಯುಗೇ…
ಮಹಾಭಾರತದ ಶ್ಲೋಕವೊಂದನ್ನು ಎಫ್‌ಬಿ ಖಾತೆಯಲ್ಲಿ ಮಹಾಂತೇಶ್‌ ಶೇರ್‌ ಮಾಡಿಕೊಂಡಿದ್ದ. ಆ ಪೋಸ್ಟ್‌ನಲ್ಲಿ ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನ ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು.. ಇನ್ನೂ ವಿಳಂಬ ಏಕೆ ಭಗವಂತ..? ಆದಷ್ಟು ಬೇಗಾ ಅವತರಿಸು ಪ್ರಭು..! ಸಂಭವಾಮಿ ಯುಗೇ.. ಯುಗೇ…’ ಎಂದು ಆರೋಪಿ ಬರೆದುಕೊಂಡಿದ್ದ.
ಇದು ಕೊಲೆಗೆ ಮೊದಲೇ ಸಂಚು ಮಾಡಲಾಗಿತ್ತು ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಫೇಸ್‌ಬುಕ್‌ ಈಗ ವೈರಲ್‌ ಆಗಿದೆ.
60 ಬಾರಿ ಇರಿದ ಕಟುಕರು
ಹಾಡಹಗಲೇ ಹತ್ತಾರು ಜನರ ಎದುರಿಗೇ ಆರೋಪಿಗಳು ಕೇವಲ 40 ಸೆಕೆಂಡ್‌ಗಳಲ್ಲಿ 60 ಬಾರಿ ಇರಿದಿದ್ದಾರೆ. ನೆಲಕ್ಕೆ ಬಿದ್ದು ಹೊರಳಾಡಿದರೂ ಬಿಡದೆ ಚಾಕುವಿನಿಂದ ಚುಚ್ಚಿದ್ದಾರೆ. ಈ ಎಲ್ಲ ದೃಶ್ಯ ಹೋಟೆಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಂದೇ ಹೋಗಬೇಕು ಎಂದು ತೀರ್ಮಾನಿಸಿಯೇ ಅವರು ಬಂದಿದ್ದರು. ಭಯಂಕರ ಸೇಡು ಇದ್ದರೆ ಮಾತ್ರ ಈ ರೀತಿ ಕೊಲೆ ಮಾಡಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯ ಎಸಗಿದ ನಾಲ್ಕೇ ತಾಸಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಬೆಳಗಾವಿ ಮೂಲಕ ಮುಂಬಯಿಗೆ ಪರಾರಿಯಾಗಿ ತಲೆಮರೆಸಿಕೊಳ್ಳುವುದು ಅವರ ಹುನ್ನಾರವಾಗಿತ್ತು.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಹಾಂತೇಶ್‌ ಶಿರೂರ್, ಮಂಜುನಾಥ್‌ ದುಮ್ಮವಾಡ ಬಂಧಿತ ಆರೋಪಿಗಳು. ಈ ಪೈಕಿ ಹುಬ್ಬಳ್ಳಿಯ ಗೋಕುಲದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ್‌ ದಂಪತಿ ವಾಸವಿದ್ದರು. ಇವರ ಜತೆಗೆ ಮಹಾಂತೇಶ್‌ ಶಿರೂರನ ಪತ್ನಿ ವನಜಾಕ್ಷಿಯನ್ನೂ ಗೋಕುಲ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಎಫ್‌ಐಆರ್‌ ದಾಖಲು
ಚಂದ್ರಶೇಖರ್‌ ಗುರೂಜಿ ಅವರ ಸೋದರ ಸಂಬಂಧಿ ಸಂಜಯ ಅಂಗಡಿ ಎಂಬವರು ನೀಡಿದ ದೂರು ಆಧರಿಸಿ ವಿದ್ಯಾನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.
ಚಂದ್ರಶೇಖರ ಅಂಗಡಿ (ಗುರೂಜಿ ಅವರ ನಿಜವಾದ ಹೆಸರು) ಅವರು ಚಂದ್ರಶೇಖರ ಗೌರಿ ಪ್ರೈವೇಟ್‌ ಲಿಮಿಟೆಡ್‌ (ಸಿ.ಜಿ.ಪರಿವಾರ ಪ್ರೈವೇಟ್‌ ಲಿಮಿಟೆಡ್‌) ಎಂಬ ಹೆಸರಿನಲ್ಲಿ ಸರಳವಾಸ್ತು ಸಂಸ್ಥೆಯನ್ನು ನಡೆಸುತ್ತಿದ್ದರು. ಇದಲ್ಲದೆ ಇನ್ನೂ ಕೆಲವು ಕಂಪನಿಗಳಿಗೆ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮಹಾಂತೇಶ ಶಿರೂರನನ್ನು 2008ರಲ್ಲಿ ಕೆಲಸಕ್ಕೆ ನೇಮಿಸಿದ್ದರು. ಮುಂದೆ 2015ರಲ್ಲಿ ಮಹಾಂತೇಶನಿಗೆ ವೈಸ್‌ ಪ್ರೆಸಿಡೆಂಟ್‌ ಆಗಿ ಬಡ್ತಿ ನೀಡಲಾಗಿತ್ತು.ಆದರೆ ಸರಳವಾಸ್ತು ಪರಿಹಾರ ಬಯಸಿ ಸಂಸ್ಥೆಗೆ ಬರುತ್ತಿದ್ದ ಜನರಿಂದ ಮಹಾಂತೇಶ ತಾನೇ ಹಣ ಪಡೆದು ಸ್ವಂತಕ್ಕೆ ಬಳಸಲಾರಂಭಿಸಿದ್ದ. ಮಹಾಂತೇಶನ ಜತೆಗೆ ಮಂಜುನಾಥ ಮರೇವಾಡ ಎಂಬಾತನೂ ಸೇರಿಕೊಂಡಿದ್ದ. ಮುಂದೆ ಈ ಅಕ್ರಮದಲ್ಲಿ ಇನ್ನೂ 20-25 ಸಿಬ್ಬಂದಿ ಶಾಮೀಲಾಗಿದ್ದರು. ಇದು ಚಂದ್ರಶೇಖರ ಗುರೂಜಿ ಮತ್ತು ನನ್ನ ಗಮನಕ್ಕೆ ಬಂದಿತ್ತು. ಹೀಗಾಗಿ ಮಹಾಂತೇಶ ಮತ್ತು ತಂಡವನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಇದೇ ಸಿಟ್ಟು ಇಟ್ಟುಕೊಂಡು ಮಹಾಂತೇಶ ಶಿರೂರ, ಹುಬ್ಬಳ್ಳಿ ಗೋಕುಲ ರಸ್ತೆಯ ಜೆ.ಪಿ.ನಗರದಲ್ಲಿ ಚಂದ್ರಶೇಖರ ಗುರೂಜಿ ಕಟ್ಟಿಸಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ಜಾಗ ಇಲ್ಲ. ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಿಲ್ಲ. ಸೋಲಾರ್‌ ಅಳವಡಿಸಿಲ್ಲ ಎಂದು ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿದ್ದ. ಈ ಪ್ರಕರಣ ಹಿಂಪಡೆಯಬೇಕಾದರೆ ಹಣ ಕೊಡಬೇಕು ಎಂದು ಚಂದ್ರಶೇಖರ ಗುರೂಜಿ ಅವರನ್ನು ಪೀಡಿಸಲಾರಂಭಿಸಿದ್ದ. ಚಂದ್ರಶೇಖರ ಗುರೂಜಿ ಇದಕ್ಕೆ ಸ್ಪಂದಿಸದೇ ಇದ್ದಾಗ ಜೀವ ಬೆದರಿಕೆ ಒಡ್ಡಿದ್ದ.
ಇದೇ ಕಾರಣಕ್ಕೆ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಇಬ್ಬರೂ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿದೆ.
ಚಂದ್ರಶೇಖರ್‌ ಗುರೂಜಿ ಅವರನ್ನು ಭೇಟಿ ಮಾಡುವುದಕ್ಕಾಗಿ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಇಬ್ಬರೂ ಹೋಟೆಲ್‌ ರಿಸೆಪ್ಶನ್‌ನಲ್ಲಿ ಕುಳಿತಿದ್ದರು. ಅಲ್ಲಿಗೆ ಚಂದ್ರಶೇಖರ್‌ ಗುರೂಜಿ ಬಂದ ಕೂಡಲೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಸಂಜಯ ಅಂಗಡಿ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top