ಕಾರ್ಕಳ : 3.5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ

ಕಾರ್ಕಳ : ನಮ್ಮೂರಿನ ಕ್ರೀಡಾಪಟುಗಳಿಗೆ ಮೂಲ ಸೌಕರ್ಯ ಒದಗಿಸಿ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು. ಅವರು ಎ. 20ರಂದು ತಾಲೂಕು ಕ್ರೀಡಾಂಗಣದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.
ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಅವರ ಒತ್ತಾಸೆ ಮೇರೆಗೆ ಅಂದಿನ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಖೇಲೋ ಇಂಡಿಯಾ ಯೋಜನೆಯಡಿ ಕಾರ್ಕಳ ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ಮಂಜೂರು ಮಾಡಿದ್ದರು. ಕ್ರೀಡಾ ಚಟುವಟಿಕೆಗಳ ಹಬ್‌ ಆಗಿ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ದಿಪಡಿಸುವ ಇರಾದೆಯಿದ್ದು, ಎಲ್ಲರೂ ಸಹಕರಿಸಬೇಕೆಂದರು.

ಕಾರ್ಕಳಕ್ಕೆ ಹೆಮ್ಮೆ
ಕಾರ್ಕಳದ ರೋಹಿತ್‌ ಕುಮಾರ್‌ ಕಟೀಲ್‌, ಮುನಿಯಾಲುವಿನ ಸುಕೇಶ್‌ ಹೆಗ್ಡೆ, ಹೆರ್ಮುಂಡೆಯ ಮಮತಾ ಪೂಜಾರಿ, ಬೋಳದ ಅಕ್ಷತಾ ಪೂಜಾರಿ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಕಾರ್ಕಳದ ಕೀರ್ತಿ ಬೆಳಗಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವೆಂದು ಬಣ್ಣಿಸಿದ ಶಾಸಕರು ಕಾರ್ಕಳ-ಹೆಬ್ರಿ ತಾಲೂಕಿನ ವಿದ್ಯಾರ್ಥಿಗಳನೇಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದನ್ನು ಕಂಡು ಖುಷಿಯಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲ್‌, ಉದ್ಯಮಿ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಜಿ.ಪಂ. ಸದಸ್ಯ ಉದಯ ಎಸ್.‌ ಕೋಟ್ಯಾನ್‌ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ್‌, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬಿಇಒ ಶಶಿಧರ್‌ ಜಿ.ಎಸ್‌., ಜಿ.ಪಂ. ಸದಸ್ಯರಾದ ಸುಮಿತ್‌ ಶೆಟ್ಟಿ ಕೌಡೂರು, ರೇಶ್ಮಾ ಉದಯ ಶೆಟ್ಟಿ, ಉದ್ಯಮಿ ನಿತ್ಯಾನಂದ ಪೈ, ತಾಲೂಕು ಕ್ರೀಡಾಧಿಕಾರಿ ರಿತೇಶ್‌ ಶೆಟ್ಟಿ ಸೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಷನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಮಾಲತಿ ಪ್ರಾರ್ಥಿಸಿದರು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಒಳಾಂಗಣ ಕ್ರೀಡಾಂಗಣದ ವಿಶೇಷತೆ
ಒಳಾಂಗಣ ಕ್ರೀಡಾಂಗಣದಲ್ಲಿ 4 ಸುಸಜ್ಜಿತ ಶಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌, ಟೇಬಲ್‌ ಟೆನ್ನಿಸ್‌ ಕೇರಂ, ಕಬಡ್ಡಿ ಕೋರ್ಟ್‌, ವ್ಯಾಯಾಮ ಶಾಲೆ ನಿರ್ಮಾಣವಾಗಲಿದೆ.

















































































error: Content is protected !!
Scroll to Top