ಕಾರ್ಕಳ : ಎಂಸಿಎಫ್‌ನ ಸಿಎಸ್‌ಆರ್ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ನಿಧಿಯಿಂದ ಕಾರ್ಕಳದ ಇಬ್ಬರಿಗೆ ಜ. 18ರಂದು ಕೃತಕ ಅಂಗ ನೀಡಲಾಯಿತು. ಕೃತಕ ಅಂಗ ಹಸ್ತಾಂತರಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ಎಂಸಿಎಫ್ ಸಂಸ್ಥೆ ನಮ್ಮ ಕೋರಿಕೆಗೆ ಸದಾ ಸ್ಪಂದಿಸುವ ಮೂಲಕ ಕಾರ್ಕಳಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಕಳೆದ ಬಾರಿ 10 ಲಕ್ಷ ರೂ. ವೆಚ್ಚದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಗೆ ಕಣ್ಣಿನ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸುವ ಮೂಲಕ ನೂರಾರು ಮಂದಿಗೆ ಬೆಳಕಾಗಿದೆ. ಇದೀಗ ಎಂಸಿಎಫ್ ಉತ್ತಮ ಗುಣಮಟ್ಟದ ಕೃತಕ ಕಾಲು ಹಾಗೂ ಕೈ ನೀಡುವ ಮೂಲಕ ಫಲಾನುಭವಿಗಳ ಬದುಕಿಗೆ ಆಧಾರವಾಗಿದೆ ಎಂದರು.

ಶಿಕ್ಷಣ ಆರೋಗ್ಯಕ್ಕೆ ಆದ್ಯತೆ- ಪ್ರಭಾಕರ್ ರಾವ್
ಎಂಸಿಎಫ್ ನಿರ್ದೇಶಕ ಕೆ. ಪ್ರಭಾಕರ್ ರಾವ್ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಸುಧಾರಣೆ ಎಂಸಿಎಫ್‌ನ ಆದ್ಯತೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕಾರ್ಕಳಕ್ಕೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಫಲಾನುಭವಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಿದ ಕಾರ್ಕಳ ರೋಟರಿ ಸಂಸ್ಥೆಯ ಅಧ್ಯಕ್ಷೆ ರೇಖಾ ಉಪಾಧ್ಯಾಯ ಹಾಗೂ ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಉಪಸ್ಥಿತರಿದ್ದರು. ಎಂಸಿಎಫ್‌ನ ಡಿಜಿಎಂ ಕೆ.ಬಿ. ಕೀರ್ತನ್ ಕುಮಾರ್ ಸ್ವಾಗತಿಸಿ, ಡಾ. ಕೆ. ಯೋಗೀಶ್ ನಿರೂಪಿಸಿ, ವಂದಿಸಿದರು.




























































