ಬೆಂಗಳೂರು: ಕೊರೋನಾ ಪರೀಕ್ಷೆ ವಿಚಾರದಲ್ಲಿ ಅಷ್ಟೇ ಅಲ್ಲ, ಕೊರೋನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕಲಬುರಗಿಯಲ್ಲೇ ಕೊರೋನಾಗೆ ಮೊದಲ ಸಾವು ದಾಖಲಾದ ಬಳಿಕ ಕಠಿಣ ನಿಯಮಾವಳಿಗಳ ಮೂಲಕ ಕೋವಿಡ್ ನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿತ್ತು. ಆ ಬಳಿಕ ತ್ವರಿತಗತಿಯಲ್ಲಿ ರಾಜ್ಯ ಬಹುತೇಕ ಜಿಲ್ಲೆಗಳನ್ನು ಲ್ಯಾಬ್ ಗಳನ್ನು ಆರಂಭಿಸಿದ ಸರ್ಕಾರ ಕೋವಿಡ್ ಟೆಸ್ಟಿಂಗ್ ವಿಚಾರದಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವ ಮೂಲಕ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೀಗ ದೇಶದಾದ್ಯಂತ ಕೊರೋನಾ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ ನಾಲ್ಕು ದಿನವಷ್ಟೇ ಆಗಿದೆ, ಶನಿವಾರವಷ್ಟೇ ಲಸಿಕೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಷ್ಟರಲ್ಲೇ ಕರ್ನಾಟಕದಲ್ಲಿ 80,686 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಲಸಿಕೆ ಪಡೆದವರ ಪೈಕಿ ಈವರೆಗೂ ಯಾವುದೇ ರೀತಿಯ ಅಡ್ಡಪರಿಣಾಮಗಳಂತಹ ಗಂಭೀರ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಮಂಗಳವಾರ ಕೋವಿಡ್ ಲಸಿಕೆ ಪಡೆದ 3,978 ಮಂದಿ ಪೈಕಿ 5 ಮಂದಿಯಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ. ಅಡ್ಡ ಪರಿಣಾಮ ಕಾಣಿಸಿಕೊಂಡ ಐಂದು ಮಂದಿಯಲ್ಲಿ ಪಶ್ಚಿಮ ವಲಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ತಲಾ ಇಬ್ಬರು ಹಾಗೂ ಯಲಹಂಕದಲ್ಲಿ ಒಬ್ಬರು ಆರೋಗ್ಯ ಕಾರ್ಯಕರ್ತರಾಗಿದ್ದಾರೆಂದು ತಿಳಿದುಬಂದಿದೆ.
ದೇಶದಲ್ಲಿ ಲಸಿಕೆ ಪಡೆದುಕೊಂಡ ಬಹುತೇಕ ಮಂದಿ ಸುರಕ್ಷಿತರಾಗಿದ್ದಾರೆ. ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ. ವದಂತಿಗಳಿಗೆ ಕಿವಿಗೊಡಬೇಡಿ. ಲಸಿಕೆ ಬಗ್ಗೆ ಆತಂಕ ಬೇಡ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆದುಕೊಂಡಿದ್ದ ಐದು ಮಂದಿಯಲ್ಲಿ ಅಡ್ಡಪರಿಣಾಮಗಳು ಕಂಡು ಬಂದಿವೆ. ಆರ್ಆರ್ ನಗರ ಮತ್ತು ಪಶ್ಚಿಮ ವಲಯದಲ್ಲಿ ತಲಾ ಎರಡು ಮತ್ತು ಯಲಹಂಕದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಜನವರಿ 18 ರಂದು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದ 30 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ವಾಕರಿಕೆ ಮತ್ತು ಮೈ-ಕೈ ನೋವು ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆಯಲ್ಲಿ ಕೆಲ ಕಾಲ ಚಿಕಿತ್ಸೆ ನೀಡಲಾಗಿದೆ.
ಇದೇ ಆಸ್ಪತ್ರೆಯಲ್ಲಿಯೇ ಅದೇ ದಿನ ಲಸಿಕೆ ಪಡೆದಿದ್ದ 35 ವರ್ಷದ ಮಹಿಳೆಯೊಬ್ಬರಲ್ಲೂ ಜ್ವರ ಕಾಣಿಸಿಕೊಂಡಿದೆ. ಬಳಿಕ ಮಹಿಳೆಗೆ ಆ್ಯಂಟಿವೈರಲ್ ಔಷಧಿಗಳನ್ನು ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಸಿಕೆ ಪಡೆದುಕೊಂಡ ಬಳಿಕ ಕೆಲವರಲ್ಲಿ ಇಂತಹ ಸಣ್ಣಪುಟ್ಟ ಅಡ್ಡಪರಿಣಾಮಗಳು ಕಂಡುಬರುತ್ತದೆ ”ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
“ಬೆಂಗಳೂರಿನಲ್ಲಿ ವರದಿಯಾದ ಯಾವುದೇ ಅಡ್ಡಪರಿಣಾಮ ಪ್ರಕರಣಗಳು ಗಂಭೀರವಲ್ಲ. ಅವರು ಕೇವಲ ಲಸಿಕೆ ಪಡೆದ ಜಾಗದಲ್ಲಿ ಊತ ಹಾಗೂ ಇತರೆ ಸಣ್ಣಪುಟ್ಟ ಸಮಸ್ಯೆಗಳಷ್ಟೇ ಕಂಡು ಬಂದಿವೆ. ಇಂಟ್ರಾಮಸ್ಕುಲರ್ ಇಂಜೆಕ್ಷನ್ ಪಡೆದಾಗ ಜನರಲ್ಲಿ ಇಂತಹ ಲಕ್ಷಣಗಳು ಸಾಮಾನ್ಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಈ ನಡುವೆ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಗಳಲ್ಲಿ, ಮಕ್ಕಳಿಗೆ ರೋಗನಿರೋಧಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಆರಂಭ ಮಾಡಿಲ್ಲ ಎಂದು ಹೇಳಲಾಗುತ್ತಿದೆ


























































