ರಾಜ್ಯದಲ್ಲಿ ಮುಂದುವರಿದ ಮುಂಗಾರು ಮಳೆಯಬ್ಬರ : ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಬೆಂಗಳೂರು, ಆ. 7: ರಾಜ್ಯದಲ್ಲಿ ಕೆಲ ದಿನಗಳಿಂದೀಚೆಗೆ ಮುಂಗಾರು ಮಳೆ ಅಬ್ಬರಿಸುತ್ತಿದ್ದು,  ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ರೆಡ್‍ ಅಲರ್ಟ್ ಘೋಷಿಸಲಾಗಿದೆ.

ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ ಹಾಗೂ ಜಲಾಶಯಗಳು ಭರ್ತಿಯಾಗಿವೆ. ಅಣೆಕಟ್ಟೆಗಳಿಂದ ನೀರು ಬಿಟ್ಟ ಪರಿಣಾಮವಾಗಿ ಹಲವೆಡೆ  ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕಳೆದ ಮೂರು ದಿನಗಳಿಂದ ಭಾರಿ  ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿಯಲ್ಲಿ  ವಾಯಭಾರ ಕುಸಿತ ಉಂಟಾದ ಪರಿಣಾಮವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭಾರಿ ಮಳೆಯಿಂದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ, ತಲಕಾವೇರಿ ಅರ್ಚಕ, ಅವರ ಪತ್ನಿ, ಸಹೋದರ ಮತ್ತು ಇಬ್ಬರು ಸಹಾಯಕ ಅರ್ಚಕರು ಸೇರಿದಂತೆ ಐದು ಜನರು ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆ ಮಾಡುವ  ಕಾರ್ಯಾಚರಣೆ ಮುಂದುವರೆದಿದೆ.

ಭಾರಿ  ಮಳೆ ಪೀಡಿತ ಜಿಲ್ಲೆಗಳ ಎಲ್ಲ  ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂತ್ರಸ್ತ ಕುಟುಂಬಗಳಿಗೆ 10,000 ರೂ. ಮಧ್ಯಂತರ ಪರಿಹಾರ ಮತ್ತು ನೈಸರ್ಗಿಕ ವಿಕೋಪದಿಂದ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾದವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವ ಸಮಯದಲ್ಲೇ ಮುಖ್ಯಮಂತ್ರಿ ಈ ನಿರ್ಧಾರ ಪ್ರಕಟಿಸಿದ್ದಾರೆ.

 error: Content is protected !!
Scroll to Top