ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ!

(ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ)

ನಿನ್ನೆ ಸಮಯ ನಿರ್ವಹಣೆ ಎಷ್ಟು ಮುಖ್ಯ ಎಂದು ನಾವು ಅರ್ಥ ಮಾಡಿಕೊಂಡೆವು. ಅದರ ಮುಂದಿನ ಭಾಗವಾಗಿ ನಾವಿಂದು ಸಮಯ ನಿರ್ವಹಣೆಯ ಬೇಸಿಕ್ಸ್ ಸಂಗತಿಗಳನ್ನು ತಿಳಿಯೋಣ.

ಸಮಯ ನಿರ್ವಹಣೆ –  ನೀವಂದುಕೊಂಡಷ್ಟು ಸುಲಭ ಅಲ್ಲ

ನಾವು ಮರುದಿನ ಮಾಡುವ ಕೆಲಸಗಳನ್ನು ಹಿಂದಿನ ದಿನವೇ ಪ್ಲಾನ್ ಮಾಡಿಕೊಂಡು ಡೈರಿಯಲ್ಲಿ ಬರೆದುಕೊಂಡರೆ ಒಳ್ಳೇದು. ಅನಿರೀಕ್ಷಿತ ಘಟನೆಗಳನ್ನು ಹೊರತುಪಡಿಸಿ ಆ ಪ್ಲಾನ್ ಹೆಚ್ಚು ಕಡಿಮೆ ಆಗದ ಹಾಗೆ ನೋಡಿಕೊಂಡರೆ ಒಳ್ಳೇದು. ಅಲ್ಲಿ ನಿಮ್ಮ ಆದ್ಯತೆಗಳ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದಷ್ಟೂ ಪ್ಲಾನಿಂಗ್ ಸುಲಭ ಆಗುತ್ತದೆ.

ಆದ್ಯತೆಗಳು ಅಂದರೇನು? ನೀವು ಮರುದಿನ ಮಾಡುವ ಕೆಲಸಗಳನ್ನು ಬರೆದಿಟ್ಟು ಅವುಗಳನ್ನು ನಾಲ್ಕು ವಿಧವಾಗಿ ಈ ರೀತಿಯಲ್ಲಿ ವಿಂಗಡನೆ ಮಾಡಬಹುದು.

೧) VERY URGENT and VERY IMPORTANT. JUST DO IT!

ಇವುಗಳು ಅತ್ಯಂತ ಪ್ರಾಮುಖ್ಯ ಕೆಲಸಗಳು ಮತ್ತು ತುರ್ತು ಕೆಲಸಗಳು. ಉದಾಹರಣೆಗೆ ಕರೆಂಟ್ ಬಿಲ್ ಕಟ್ಟಲು ನಾಳೆಯೇ ಲಾಸ್ಟ್ ಡೇಟ್. ಆರೋಗ್ಯ ತೊಂದರೆ ಕೊಡ್ತಾ ಇರುವಾಗ ನಾಳೆಯೇ ಡಾಕ್ಟರರ ಭೇಟಿ ಮಾಡಬೇಕು. ಅಮ್ಮ ಯಾವುದೋ ಮಾತ್ರೆ ತರಲು ಹೇಳಿದ್ದಾರೆ. ಮಗನ ಶಾಲೆಯ ಫೀಸ್ ಕಟ್ಟಲು ನಾಳೆಯೇ ಲಾಸ್ಟ್ ದಿನ. ನಿಮ್ಮ ಪತ್ನಿಯ ಮನೆಯಲ್ಲಿ ನಾಳೆಯೇ ಒಂದು ಧಾರ್ಮಿಕ ಕಾರ್ಯಕ್ರಮ ಇದೆ ಮತ್ತು ನೀವು ಹೋಗದೆ ಇರುವ ಹಾಗೆ ಇಲ್ಲ. ನಿಮ್ಮ ಬೆಸ್ಟ್ ಫ್ರೆಂಡಿನ ಮದುವೆ ನಾಳೆಯೇ ಇದೆ. ನಿಮ್ಮ ಆಫೀಸಲ್ಲಿ ಒಂದು ತುರ್ತು ಸಭೆಯನ್ನು ಬಾಸ್ ಕರೆದಿದ್ದಾರೆ, ನೀವು ಆಸ್ಪತ್ರೆಯಲ್ಲಿ ಸೀರಿಯಸ್ ಆಗಿರುವ ನಿಮ್ಮ ಬಂಧು ಒಬ್ಬರನ್ನು ನೋಡಲು ಹೋಗಬೇಕು, ನಿಮ್ಮ ಮಗನ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ನಿಮ್ಮ ಮಗನ ಪರ್ಫಾರ್ಮೆನ್ಸ್ ಇದೆ, ನೀವು ನೋಡಲು ಹೋಗಬೇಕು. ನಿಮ್ಮ ಮಗಳ ಶಾಲೆಯಲ್ಲಿ ನಾಳೆಯೇ ಪೋಷಕರ ಸಭೆ ಇದೆ. ನಿಮ್ಮ ಮೊಬೈಲ್ ರೀಚಾರ್ಜ್ ಮಾಡಲು ನಾಳೆಯೇ ಕೊನೆಯ ದಿನ…….ಇತ್ಯಾದಿ. ಇದರಲ್ಲಿ ಯಾವುದನ್ನೂ ಮಿಸ್ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಅವುಗಳನ್ನು ಆದ್ಯತೆಯಾಗಿ ಮಾಡಿ ಮುಗಿಸಿ ಅನ್ನುವುದು ತಜ್ಞರ ಸಲಹೆ. ಹತ್ತಾರು ಕೆಲಸಗಳು ಇದ್ದಾಗ ಅದರಲ್ಲಿಯೂ ಯಾವುದನ್ನು  ಮೊದಲು ಮಾಡಬೇಕು ಎಂದು ನಿರ್ಧಾರ ಮಾಡುವುವವರು ನೀವೇ! ಅನಿವಾರ್ಯವಾಗಿ ಒಂದೆರಡು ಮದುವೆಗೆ ಹೋಗಲು ಆಗದಿದ್ದರೆ ಅವರಿಗೆ ಕಾಲ್ ಮಾಡಿ ಶುಭ ಹಾರೈಸಲು ಮರೆಯಬೇಡಿ ಅನ್ನುವುದು ನನ್ನ ಸಲಹೆ.

೨) VERY IMPORTANT but NOT URGENT – You DECIDE.

ನೀವು ಮಾಡಲಿರುವ ಎಷ್ಟೋ ಕೆಲಸಗಳು ಪ್ರಾಮುಖ್ಯವಾಗಿ ಇರುತ್ತವೆ. ಆದರೆ ತುರ್ತು ಅಲ್ಲ. ಉದಾಹರಣೆಗೆ ನಿಮ್ಮ ಫ್ರೆಂಡ್ ಮನೇಲಿ ಒಂದು ಪಾರ್ಟಿ ಇದೆ. ಅದು ಪ್ರಾಮುಖ್ಯ ಹೌದು. ಆದರೆ ತುರ್ತು ಅಲ್ಲ. ನೀವು ಯಾವುದೋ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಬೇಕು (ಅಲ್ಲಿ ಇನ್ನೂ ಹಲವಾರು ಅತಿಥಿಗಳು ಇದ್ದಾರೆ). ನೀವು ಯಾವುದೋ ಪತ್ರಿಕೆಗೆ ಒಂದು ಲೇಖನ ಬರೆದುಕೊಡಲು ಒಪ್ಪಿದ್ದೀರಿ ಮತ್ತು ಅದಕ್ಕೆ ಇನ್ನೂ ಒಂದು ವಾರ ಇದೆ. ನಿಮ್ಮ ಬ್ಯಾಂಕ್ ಸಾಲದ EMI ಕಟ್ಟಲು ಬಾಕಿ ಇದೆ ಮತ್ತು ಅದಕ್ಕೆ ಇನ್ನೂ ಎರಡು ದಿನ ಸಮಯ ಇದೆ. ಅಂತಹ ಕೆಲಸಗಳಲ್ಲಿ ಕೆಲವನ್ನು ನೀವು POSTPONE ಮಾಡಬಹುದು. ಆ ಮುಖ್ಯವಾದ ಕೆಲಸಗಳನ್ನು ಮಾಡದೆ ಇರಬೇಡಿ. ಆದರೆ ಯಾವುದನ್ನು ಮೊದಲು ಮಾಡಬೇಕು, ಯಾವುದನ್ನು ನಿಧಾನವಾಗಿ ಮಾಡಬೇಕು ಎಂದು  ನಿರ್ಧಾರ ನೀವೇ ಮಾಡಿ.

೩) VERY URGENT but NOT IMPORTANT – DELEGATE them!

ಇನ್ನೂ ಕೆಲವು ಕೆಲಸಗಳು ತುರ್ತು ಆಗಿರುತ್ತವೆ ಆದರೆ ಪ್ರಾಮುಖ್ಯ ಆಗಿರುವುದಿಲ್ಲ. ಉದಾಹರಣೆಗೆ ಪಕ್ಕದ ಮನೆಯವರ ಗೃಹಪ್ರವೇಶ ನಾಳೆಯೇ ಇದೆ. ಆದರೆ ನಿಮಗೆ ಅದೇ ದಿನ ಬಾಸ್ ಕರೆದಿರುವ ಮೀಟಿಂಗ್ ಇದೆ. ಆಗ ನೀವು ಗೃಹಪ್ರವೇಶಕ್ಕೆ ನಿಮ್ಮ ಮನೆಯರನ್ನು ಕಳುಹಿಸಬಹುದು. ನಿಮ್ಮ ಆಫೀಸಿನಲ್ಲಿ AC ಕೈಕೊಟ್ಟಿದೆ. ರಿಪೇರಿ ಮಾಡಲು ಯಾರೂ ಸಿಗುತ್ತಿಲ್ಲ. ಆಗ ಒಂದೆರಡು ದಿನ ಫ್ಯಾನ್ ಹಾಕಿ ಕೆಲಸ ಮಾಡಬಹುದು. ನೀವು ಯಾವುದೋ ಪ್ರೋಗ್ರಾಮ್ ಒಪ್ಪಿಕೊಂಡಿದ್ದೀರಿ. ಅದೇ ಹೊತ್ತಿಗೆ ನಿಮಗೆ ಅನಾರೋಗ್ಯ ಇದೆ. ಆಗ ನಿಮ್ಮಷ್ಟೇ ಸಾಮರ್ಥ್ಯ ಇರುವ ಇನ್ನೊಬ್ಬ ಭಾಷಣಕಾರರನ್ನು ನೀವು (ಸಂಘಟಕರ ಒಪ್ಪಿಗೆ ಪಡೆದು) ಕಳುಹಿಸಿಕೊಡಬಹುದು. ಇದಕ್ಕೆ DELEGATION ಅನ್ನುತ್ತಾರೆ.

೪) NOT VERY URGENT, NOT VERY IMPORTANT – DELETE them!

ನಾವು ಮಾಡಲು ಹೊರಡುವ ಇನ್ನೂ ಕೆಲವು ಕೆಲಸಗಳು ತುರ್ತು ಕೂಡ ಆಗಿರುವುದಿಲ್ಲ ಮತ್ತು ಪ್ರಾಮುಖ್ಯವೂ ಆಗಿರುವುದಿಲ್ಲ. ಉದಾಹರಣೆಗೆ ಮೊಬೈಲ್ ಚಾಟಿಂಗ್ ಮಾಡುವುದು, ಗುಂಡು ಪಾರ್ಟಿ ಆಟೆಂಡ್ ಮಾಡುವುದು, ಕಾರಿನಲ್ಲಿ ಜಾಲಿ ಲಾಂಗ್ ರೈಡ್  ಹೋಗುವುದು, ಸುಮ್ಮನೆ ಕೂತು ಹರಟುವುದು, ಗಾಸಿಪ್ ಮಾತಾಡುವುದು..ಇಂತಹ ಎಷ್ಟೋ ಕೆಲಸಗಳು ಅಗತ್ಯವೂ ಅಲ್ಲ. ಪ್ರಾಮುಖ್ಯವೂ ಅಲ್ಲ. ಅವುಗಳನ್ನು ಮಾಡದಿರುವುದು ಒಳ್ಳೆಯದು. ಆದರೆ ದುರಂತವೆಂದರೆ ನಮ್ಮ ದಿನಚರಿಯಲ್ಲಿ ಇಂತಹ ಕೆಲಸಗಳೇ ಹೆಚ್ಚು ಇರುತ್ತವೆ, ಹೌದಲ್ಲ ?

ಎಲ್ಲದಕ್ಕೂ ಎಸ್ ಅನ್ನಬೇಡಿ. ನೋ ಹೇಳಲು ಕಲಿಯಿರಿ!

ಕೆಲವರು ತಮ್ಮ ಮಿತಿಗಿಂತ ಹೆಚ್ಚು ಕೆಲಸ ವಹಿಸಿಕೊಂಡು ಒತ್ತಡದಲ್ಲಿಯೇ ಇರುತ್ತಾರೆ. ನಿಮ್ಮ ಸುತ್ತಮುತ್ತ ಇರುವ ಕೆಲವು ಜನರು ನಿಮ್ಮ ಕೆಲಸಗಳನ್ನು ನಿಮ್ಮಷ್ಟೇ ಕ್ಷಮತೆಯಿಂದ ಮಾಡುವ ಸಾಮರ್ಥ್ಯ ಹೊಂದಿರಬಹುದು. ಅವರಲ್ಲಿ ಉತ್ಸಾಹವೂ ಇರಬಹುದು. ಅವರಿಗೆ ಕೆಲಸಗಳನ್ನು ಡೆಲಿಗೇಟ್ ಮಾಡಿ. ಅವರ ಕೆಲಸಗಳನ್ನು ನೀವು ಮೆಚ್ಚಿ ಒಂದೆರಡು ಮಾತು ಹೇಳಿದರೆ ಅವರು ಇನ್ನೂ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ನಿಮ್ಮ ಕೆಲಸದ ಹೊರೆಯನ್ನು ಇಳಿಸುತ್ತಾರೆ. ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಹಂತದಲ್ಲಿಯೇ ನೀವು ಕೆಲವು ಕಡೆ NO ಹೇಳಲು ಕಲಿತರೆ, ಅಥವಾ NEXT TIME ಹೇಳಲು ಕಲಿತರೆ ನಿಮ್ಮ ಆಸಕ್ತಿಯ ಕೆಲಸಗಳನ್ನು ಹೆಚ್ಚು ಖುಷಿಯಿಂದ ಮಾಡಲು ಸಾಧ್ಯವಾಗುತ್ತದೆ. ಹೆಚ್ಚು ಕೆಲಸಗಳನ್ನು ವಹಿಸಿಕೊಂಡು ಒತ್ತಡಪಡುವ ವ್ಯಕ್ತಿಗಳಿಗಿಂತ ಕಡಿಮೆ ಕೆಲಸಗಳನ್ನು ವಹಿಸಿಕೊಂಡು ಪೂರ್ತಿಯಾಗಿ  ಮಾಡುವವರು ಹೆಚ್ಚು ಸಕ್ಸೆಸ್ ಪಡೆಯುತ್ತಾರೆ.

ಯಾವುದೇ ತಂಡದಲ್ಲಿ ಎಲ್ಲವನ್ನೂ ತಾನೇ ವಹಿಸಿಕೊಂಡು ಕೆಲಸ ಮಾಡುವ ನಾಯಕನಿಗಿಂತ ಬೇರೆಯವರಿಂದ ಕೆಲಸ ಮಾಡಿಸುವ ನಾಯಕನು ಹೆಚ್ಚು ಯಶಸ್ವೀ ಆಗುತ್ತಾನೆ. ನೀವು ತಂಡದಲ್ಲಿ ನಂಬಿಕೆ ಇರಿಸಬೇಕು ಅಷ್ಟೇ!

ಸಮಯ ನಿರ್ವಹಣೆಯ ಬಗ್ಗೆ ಇನ್ನೂ ಇದೆ. ನಾಳೆ ಬರೆಯುವೆ.









































































































error: Content is protected !!
Scroll to Top