ಸಾಲ ತೀರಿಕೆ, ಹೊಣೆ ನಿರ್ವಹಣೆಗೆ, ಒಬ್ಬ ವ್ಯಕ್ತಿ ತನ್ನ ಖಾತೆಯಿಂದ ಪೂರ್ಣವಾಗಿಯೋ ಭಾಗವಾಗಿಯೋ ಪಾವತಿಸುವಂತೆ ಬರೆದ ಚಕ್‌ನ ಮೊಬಲಗನ್ನು ಅಸಮರ್ಪಕ ಹಣ ಖಾತೆಯಲ್ಲಿರುವ ಕಾರಣದಿಂದ ಅಥವಾ ಖಾತೆಯಲ್ಲಿ ಜಮಾ ಇಟ್ಟಿರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಚೆಕ್‌ನಲ್ಲಿ ಬರೆದಿರುವ ಕಾರಣದಿಂದ ಬ್ಯಾಂಕ್ ಚೆಕ್‌ನಲ್ಲಿ ಕಾಣಿಸಿದ ಹಣವನ್ನು ಪಾವತಿಸಲು ನಿರಾಕರಿಸಿದರೆ ಅಥವಾ ನಗದೀಕರಣಕ್ಕಾಗಿ ಹಾಜರುಪಡಿಸಿರುವ ಚೆಕ್ ಬ್ಯಾಂಕ್‌ನಿಂದ ಹಿಂತಿರುಗಿಸಲ್ಪಟ್ಟಿದ್ದರೆ, ಈ ಸಂಧರ್ಭದಲ್ಲಿ ಚೆಕ್ ನೀಡಿದ ವ್ಯಕ್ತಿಯು ವರ್ಗಾವಣೀಯ ಲಿಖಿತ ಪತ್ರಗಳ ಅಧಿನಿಯಮ 1881ರ ಕಲಂ 138 ರಂತೆ ಚೆಕ್ ನೀಡಿದ ವ್ಯಕ್ತಿಯು ಅಪರಾಧವೆಸಗಿದಂತಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಚೆಕ್ ಎಂಬ ಪದವನ್ನು ಮೇಲ್ಕಾಣಿಸಿದ ಕಾನೂನಿನ ಕಲಂ 6ರಲ್ಲಿ ವ್ಯಾಖ್ಯಾನಿಸಲಾಗಿದ್ದು ಅದರಂತೆ ಚೆಕ್ ಎಂಬುದು ಒಂದು ನಿರ್ಧಿಷ್ಟ ಬ್ಯಾಂಕ್‌ಗೆ ಸಂಬಂದಪಟ್ಟ ವಿನಿಮಯ ಪತ್ರ ಆಗಿರುತ್ತದೆ ಮತ್ತು ಯಾವುದೇ ಹರಿದ ಚೆಕ್‌ನ ವಿದ್ಯುನ್ಮಾನ ಬಿಂಬ ಅಥವಾ ವಿದ್ಯುನ್ಮಾನ ನಮೂನೆಯಲ್ಲಿರುವ ಚೆಕ್ ಸಹ ಅದರ ವ್ಯಾಖ್ಯಗೆ ಒಳಪಡುತ್ತದೆ.
ಮೇಲ್ಕಾಣಿಸಿದ ಕಾನೂನಿನ ಕಲಂ 118ರ ಪ್ರಕಾರ ಪ್ರತಿಯೊಂದು ಚೆಕ್ ಅಥವಾ ವರ್ಗಾವಣೀಯ ಲಿಖಿತ ಪತ್ರವು ಸಾಕ್ಷದ ವಿಚಾರದಲ್ಲಿ ವಿಶೇಷವಾದ ಪೂರ್ವ ಭಾವನೆಯನ್ನು ಮತ್ತು ಪೂರ್ವ ಚಿಂತನೆಗಳನ್ನು ಹೊಂದಿರುತ್ತದೆ. ಈ ಪ್ರಕಾರ ವ್ಯತಿರಿಕ್ತವಾಗಿ ರುಜುವಾತು ಪಡಿಸುವ ತನಕ ಪ್ರತಿಯೊಂದು ಚೆಕ್ ಅಥವಾ ವರ್ಗಾವಣೀಯ ಲಿಖಿತ ಪತ್ರವು ಅದಕ್ಕೆ ಸಂಬಂಧಪಟ್ಟ ಪ್ರತಿಫಲ ಮತ್ತು ದಿನಾಂಕಕ್ಕೆ ಸಂಬಂಧಪಟ್ಟಂತೆ ಚೆಕ್ ಅಥವಾ ವರ್ಗಾವಣೀಯ ಲಿಖಿತ ಪತ್ರ ಹೊಂದಿರುವಾತನ ಪರವಾಗಿ ವಿಶೇಷವಾದ ಪೂರ್ವಭಾವನೆಯನ್ನು ಹೊಂದಿರುತ್ತದೆ. ಈ ಕಾರಣದಿಂದ ಯಾವುದೇ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಚೆಕ್‌ನ್ನು ಇನ್ನೊಬ್ಬ ವ್ಯಕ್ತಿಗೆ ನೀಡುವ ಸಂದರ್ಭದಲ್ಲಿ ಅದರಲ್ಲಿ ದಿನಾಂಕ, ಚೆಕ್‌ನ ಮೊತ್ತ ಮತ್ತಿತರ ವಿವರಗಳನ್ನು ಸಂಪೂರ್ಣವಾಗಿ ಬರೆದ ನಂತರ ಸಹಿಮಾಡಿ ನೀಡುವುದು ಆತನ ಆದ್ಯ ಕರ್ತವ್ಯವಾಗಿರುತ್ತದೆ. ಮಾತ್ರವಲ್ಲದೆ ತನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಭರ್ತಿಮಾಡಿರುವ ಅಥವಾ ಭರ್ತಿ ಮಾಡದೇ ಸಹಿ ಮಾಡಿರುವ ಯಾವುದೇ ಚೆಕ್ ಅನಾವಶ್ಯಕವಾಗಿ ಇನ್ನೊಬ್ಬ ವ್ಯಕ್ತಿಯ ಸುಪರ್ಧಿಯಲ್ಲಿರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬ್ಯಾಂಕ್ ಖಾತೆದಾರ ಹೊಂದಿರುತ್ತಾನೆ. ಇಲ್ಲವಾದಲ್ಲಿ ಮುಂದಕ್ಕೆ ಯಾವುದೇ ಸಂದರ್ಭದಲ್ಲಿ ಅಂತಹ ಭರ್ತಿಮಾಡಿರುವ ಅಥವಾ ಭರ್ತಿ ಮಾಡದೇ ಸಹಿ ಮಾಡಿರುವ ಚೆಕ್‌ನ್ನು ಹೊಂದಿರುವ ವ್ಯಕ್ತಿಯು ಅದನ್ನು ದುರುಪಯೋಗ ಪಡಿಸಿ ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರು ಪಡಿಸಿದ ಸಂದರ್ಭದಲ್ಲಿ ಚೆಕ್‌ಗೆ ಸಂಬಂಧಪಟ್ಟ ಖಾತೆದಾರನ ಬ್ಯಾಂಕ್ ಖಾತೆಯಲ್ಲಿ ಸರಿಯಾದ ಮತ್ತು ಸಾಕಷ್ಟು ಮೊತ್ತ ಜಮಾ ಇಲ್ಲದ ಕಾರಣದಿಂದಾಗಿ ಅಥವಾ ಬ್ಯಾಂಕ್ ಖಾತೆಯನ್ನು ಮುಚ್ಚಿರುವ ಕಾರಣಕ್ಕಾಗಿ ಚೆಕ್ ಅಮಾನ್ಯಗೊಂಡಲ್ಲಿ ಅನಾವಶ್ಯಕವಾಗಿ ಅಮಾನ್ಯಗೊಂಡ ಚೆಕ್‌ಗೆ ಸಂಬಂಧಪಟ್ಟ ಖಾತೆದಾರನು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಅಪರಾಧವೆಸಗಿದಂತಾಗಿ ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುವ ಪರಿಸ್ಥಿತಿ ಉಂಟಾಗಬಹುದು ಮತ್ತು ಈ ಸಂದರ್ಭದಲ್ಲಿ ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ಪೂರ್ವಭಾವನೆಯ ಲಾಭವನ್ನು ಚೆಕ್ ಹೊಂದಿರುವ ವ್ಯಕ್ತಿ ದುರುಪಯೋಗ ಪಡಿಸಿಕೊಂಡು ಚೆಕ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆದಾರನನ್ನು ತೊಂದರೆಗೆ ಒಳಪಡಿಸುವ ಹೆಚ್ಚಿನ ಸಾಧ್ಯತೆ ಇರುತ್ತದೆ.























