ಪ್ರಸ್ತುತ ನಮ್ಮ ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ, ಪಾರ್ಸಿ ಮತ್ತು ಯಹೂದಿ ಮುಂತಾದ ವಿವಿಧ ಧರ್ಮೀಯರಿಗೆ ಸಂಬಂಧಿಸಿದಂತೆ ಅವರ ವಿವಾಹ ಮತ್ತು ವಿಚ್ಛೇದನದ ವಿಚಾರದಲ್ಲಿ ಪ್ರತ್ಯೇಕವಾದ ಕಾನೂನು ಜ್ಯಾರಿಯಲ್ಲಿರುತ್ತದೆ. ಈ ಪೈಕಿ ಇಸ್ಲಾಂ (ಮುಸ್ಲಿಂ) ಧರ್ಮಕ್ಕೆ ಸೇರಿದ ಪುರುಷ ಮತ್ತು ಮಹಿಳೆಯರಿಗೆ ಅವರ ಧರ್ಮಕ್ಕನುಸಾರವಾಗಿ ಕೆಲವೊಂದು ಕಟ್ಟಳೆ ನೀತಿ, ನಿಯಮಗಳನ್ನು ಕಾನೂನುಬದ್ಧವೆಂದು ಪರಿಗಣಿಸಲಾಗಿದೆ. ಮುಸ್ಲಿಂ ವಿವಾಹ ಪದ್ಧತಿಯ ಪ್ರಕಾರ ವಿವಾಹವು ಕಾನೂನಿನ ಅನುಸಾರವಾಗಿ ಮಾನ್ಯವಾದಂತಹ ವಿವಾಹ ಎಂದು ಪರಿಗಣಿಸಲು ವಿವಾಹವಾಗಬಯಸುವ ವಧು-ವರರು ವಿವಾಹದ ಸಮಯದಲ್ಲಿ ಪ್ರೌಢಾವಸ್ಥೆ ತಲುಪಿರಬೇಕು ಮತ್ತು ಉಭಯತರರು ಮಾನಸಿಕವಾಗಿ ಆರೋಗ್ಯವಂತರಿರಬೇಕು ಹಾಗೂ ಅವರಿಬ್ಬರೂ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿರಬೇಕು.
ಯಾವುದೇ ಮುಸ್ಲಿಂ ಹುಡುಗಿ ಮುಸ್ಲಿಂ ಅಲ್ಲದ ಪುರುಷನನ್ನು ಮದುವೆಯಾಗುವ ಹಾಗೆ ಇರುವುದಿಲ್ಲ. ಮದುವೆಗೆ ವಧು-ವರರು ಪರಸ್ಪರ ಸಮ್ಮತಿಸಿರಬೇಕು. ವಧು-ವರರು ನಿಷೇಧಿತ ಸಂಬಂಧಿಗಳಾಗಿರಕೂಡದು. ಮುಸ್ಲಿಂ ಸಮುದಾಯದವರ ಕಾನೂನುಬದ್ಧ ವಿವಾಹ ಸಂಬಂಧ ಜರುಗಿಸಬೇಕಾದ ಔಪಚಾರಿಕ ಕಾರ್ಯಗಳ ಪೈಕಿ ವಿವಾಹದ ಪ್ರಸ್ತಾವ ಮತ್ತು ಅಂಗೀಕಾರ ಅಂದರೆ ಉಭಯ ಪಕ್ಷಗಳವರಲ್ಲಿ ಒಬ್ಬರು ವಿವಾಹದ ಪ್ರಸ್ತಾವ ಮಾಡಬೇಕು ಮತ್ತು ಅದನ್ನು ಮತ್ತೊಬ್ಬರು ಅಂಗೀಕರಿಸಬೇಕು. ಇದನ್ನು ನಿಖಾಃ ಎಂದು ಕರೆಯಲಾಗುತ್ತದೆ. ಪ್ರಸ್ತಾಪ ಮತ್ತು ಅಂಗೀಕಾರ ಬರಹದಲ್ಲಿ ಅಥವಾ ಮೌಖಿಕವಾಗಿ ಇರಬಹುದು. ಬರಹದಲ್ಲಿದ್ದರೆ ಅದನ್ನು ನಿಖಾಃ ನಾಮಾ ಎಂದು ಕರೆಯುತ್ತಾರೆ. ಅದಕ್ಕೆ ವಧು ವರ ಇಬ್ಬರೂ ಸಹಿ ಮಾಡಬೇಕು. ನಿಖಾಃದ ಪ್ರಸ್ತಾಪ ಮತ್ತು ಅಂಗೀಕಾರ ಎರಡೂ ಏಕ ಕಾಲದಲ್ಲಿ ಮತ್ತು ಇಬ್ಬರು ಮುಸ್ಲಿಂ ಪುರುಷ ಅಥವಾ ಒಬ್ಬ ಪುರುಷ ಅಥವಾ ಇಬ್ಬರು ಸ್ತ್ರೀ ಸಾಕ್ಷಿಗಳ ಸಮಕ್ಷಮ ಜರುಗಬೇಕು. ಪ್ರಸ್ತಾಪ ಮತ್ತು ಅಂಗೀಕಾರ ಯಾವುದೇ ಷರತ್ತಿಗೆ ಒಳಪಟ್ಟಿರಬಾರದು. ಮುಸ್ಲಿಂ ಧರ್ಮ ಗುರುಗಳಾದ ಮೌಲ್ವಿಯು ವಿವಾಹಗಳ ಸಂಬಂಧ ಒಂದು ರಿಜಿಸ್ಟರನ್ನು ಹೊಂದಿದ್ದು ಅದರಲ್ಲಿ ವಧು-ವರ ಮತ್ತು ಸಾಕ್ಷಿದಾರರು ಸಹಿ ಮಾಡಬೇಕು. ವಿವಾಹವಾಗಬಯಸುವ ಪುರುಷನು ತನ್ನ ಪತ್ನಿಗೆ ಮೆಹರ್ ಅಂದರೆ ಪತಿಯು ಪತ್ನಿಗೆ ಮದುವೆಯ ಸಂಬಂಧ ಪ್ರತಿಫಲವಾಗಿ ಮತ್ತು ಪತ್ನಿಯ ಗೌರವಾರ್ಥ ಆಕೆಗೆ ಕೊಡುವ ಕಾಣಿಕೆಯನ್ನು ನಿರ್ಣಯಿಸಿ ಅದನ್ನು ವಿವಾಹದ ರಿಜಿಸ್ಟರ್‌ನಲ್ಲಿ ಮತ್ತು ನಿಖಾಃ ನಾಮದಲ್ಲಿ ದಾಖಲಿಸಿ ಪಾವತಿ ಮಾಡಬೇಕಾಗುತ್ತದೆ.
ಸುನ್ನಿ ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿ ಇವರೊಳಗಿನ ಮದುವೆ ಇಸ್ಲಾಂ ಕಾನೂನಿನನ್ವಯ ಸಿಂಧುವಾಗುತ್ತದೆಯಾದರೂ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾನೂನು 1872ರನ್ವಯ ಅದು ನೊಂದಾವಣೆಯಾಗದಿದ್ದಲ್ಲಿ ಕಾನೂನುಬಧ್ಧ ವಿವಾಹವೆಂದು ಪರಿಗಣಿಸಲಾಗುವುದಿಲ್ಲ. ಮುಸ್ಲಿಂ ವಿವಾಹ ವಿಸರ್ಜನಾ ಅಧಿನಿಯಮ 1939 ಎಂಬ ಕಾನೂನು ಭಾರತ ದೇಶದಲ್ಲಿ ಜ್ಯಾರಿಯಲ್ಲಿದ್ದುಇದು ದೇಶದ ಮುಸ್ಲಿಂ ವಿವಾಹಿತ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಈ ಕಾನೂನಿನ ಪ್ರಕಾರ ವಿವಾಹಿತ ಮುಸ್ಲಿಂ ಮಹಿಳೆಯು ತನ್ನ ದಾಂಪತ್ಯ ಜೀವನದ ಸಂಧರ್ಭದಲ್ಲಿ ಗಂಡನಿಂದ ನಿರ್ಲಕ್ಷಿಲ್ಪಟ್ಟಾಗ ಅಥವಾ ಆತನಿಂದ ತೀವ್ರ ತರಹದ ಅನ್ಯಾಯಕ್ಕೆ ಒಳಗಾಗಿ ಆಕೆಯ ವೈವಾಹಿಕ ಜೀವನವು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದಾಗ ಆಕೆ ನ್ಯಾಯಾಲಯದ ಮುಖಾಂತರ ತನ್ನ ಗಂಡನಿಂದ ವಿಚ್ಚೇದನವನ್ನು ಪಡೆಯುವ ಹಕ್ಕನ್ನು ಕೆಲವು ಸಂದರ್ಭಗಳಲ್ಲಿ ಅಂದರೆ ನಾಲ್ಕು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಅವಧಿಯಿಂದ ವಿವಾಹಿತ ಮಹಿಳೆಯ ಗಂಡನು ನಾಪತ್ತೆಯಾದಲ್ಲಿ ಅಂದರೆ ಆತ ಎಲ್ಲಿ ಇರುವನೆಂಬ ಬಗ್ಗೆ ಆಕೆಗೆ ತಿಳಿಯದಿರುವ ಸಂಧರ್ಭದಲ್ಲಿ, ಆತಳ ಪತಿಯು ಎರಡು ವರ್ಷಗಳಿಗಿಂತ ಜಾಸ್ತಿ ಸಮಯದಿಂದ ಆಕೆಯನ್ನು ಸಂರಕ್ಷಿಸದೇ ನಿರ್ಲಕ್ಷಿಸಿರುವ ಸಂಧರ್ಭದಲ್ಲಿ, ವಿವಾಹಿತ ಮಹಿಳೆಯ ಪತಿಯು ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗಾಗಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾದಾಗ ಅಥವಾ ಆಕೆಯ ಗಂಡನು ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಸಕಾರಣವಿಲ್ಲದೇ ತನ್ನ ವೈವಾಹಿಕ ಭಾದ್ಯತೆಗಳನ್ನು ನಿರ್ವಹಿಸಲು ವಿಫಲನಾದಾಗ, ಆಕೆಯ ಗಂಡ ವಿವಾಹದ ಸಂದರ್ಭ ಮತ್ತು ಅನಂತರ ನಪುಂಸಕನಾಗಿರುವ ಸಂಧರ್ಭದಲ್ಲಿ, ಆಕೆಯ ಗಂಡನು ಕನಿಷ್ಟ ಎರಡು ವರ್ಷಗಳಿಂದ ತೀವ್ರ ತರಹದ ಮಾನಸಿಕ ಖಾಯಿಲೆ ಅಥವಾ ಗುಹ್ಯ ರೋಗದಿಂದ ಬಳಲುತ್ತಿದ್ದಾಗ, ವಿವಾಹದ ಸಮಯ ಆಕೆಯು 15 ರಿಂದ 18 ವರ್ಷದ ಒಳಗಿನ ಪ್ರಾಯದವಳಾಗಿದ್ದು ಆಕೆಯ ಇಚ್ಚೆಗೆ ವಿರುದ್ದವಾಗಿ ಆಕೆಯ ಪೋಷಕರು ಅಥವಾ ಪಾಲಕರು ಬಲಾತ್ಕಾರವಾಗಿ ಆಕೆಯ ವಿವಾಹವನ್ನು ನೆರವೇರಿಸಿದಾಗ, ವಿವಾಹಿತ ಪತ್ನಿಯ ಗಂಡನು ಆಕೆಯೊಂದಿಗೆ ಕ್ರೂರತನದಿಂದ ವರ್ತಿಸಿದಾಗ ಅಂದರೆ ಆಕೆಗೆ ಮಾನಸಿಕ ಅಥವಾ ದೈಹಿಕ ಹಿಂಸೆ ಅಥವಾ ಕಿರುಕುಳವನ್ನು ನೀಡಿದಾಗ ಅಥವಾ ಆಕೆಯ ಗಂಡ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಾಗ ಅಥವಾ ಆತ ತನ್ನ ಪತ್ನಿಯನ್ನು ಅನೈತಿಕ ಜೀವನ ನಡೆಸಲು ಒತ್ತಾಯಿಸಿದಾಗ ಅಥವಾ ಒಪ್ಪಿಗೆ ಇಲ್ಲದೇ ತನ್ನ ಪತ್ನಿಯ ಆಸ್ತಿಯನ್ನು ಆಕೆಯ ಪತಿಯು ಮಾರಾಟ ಮಾಡಿದಾಗ ಅಥವಾ ಆಕೆಗೆ ತನ್ನ ಸ್ವಂತ ಆಸ್ತಿಯನ್ನು ಅನುಭವಿಸುವಲ್ಲಿ ಪತಿಯು ಅಡ್ಡಿ ಆತಂಕ ಉಂಟು ಮಾಡಿದಾಗ, ಆಕೆಗೆ ಅಂದರೆ ಪತ್ನಿಗೆ ತನ್ನ ಧಾರ್ಮಿಕ ವಿಧಿಗಳನ್ನು ಆಚರಿಸುವಲ್ಲಿ ಗಂಡ ತಡೆ ಒಡ್ಡಿದಾಗ, ಗಂಡನಿಗೆ ಒಬ್ಬಳಿಗಿಂತ ಹೆಚ್ಚು ಪತ್ನಿಯರಿದ್ದ ಸಂದರ್ಭದಲ್ಲಿ ಪತ್ನಿಯನ್ನು ಇತರ ಪತ್ನಿಯರೊಂದಿಗೆ ಸಮಾನ ದೃಷ್ಟಿಯಿಂದ ನೋಡಿಕೊಳ್ಳದಿದ್ದಾಗ, ಇತ್ಯಾದಿ ಸಂಧರ್ಭಗಳಲ್ಲಿ ಮುಸ್ಲಿಂ ವಿವಾಹಿತ ಪತ್ನಿಯು ತನ್ನ ಗಂಡನಿಂದ ನ್ಯಾಯಿಕ ವಿಚ್ಛೇದನವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಈ ರೀತಿಯಾಗಿ ವಿವಾಹ ವಿಚ್ಚೇದನೆ ಆದ ಸಂಧರ್ಭದಲ್ಲಿ ಪತಿ ಪತ್ನಿಯರು ಪರಸ್ಪರರ ಆಸ್ತಿಗೆ ವಾರಿಸುದಾರರಾಗುವುದಿಲ್ಲ. ಆದರೆ ಪತ್ನಿಯು ಬಾಕಿ ಉಳಿದ ಮೆಹರ್ ಗೆ ಹಕ್ಕುದಾಳಾಗುತ್ತಾಳೆ ಮತ್ತು ವಿಚ್ಛೇದಿತರಾದ ಪತಿ ಪತ್ನಿ ಇಬ್ಬರೂ ಬೇರೆಯವರನ್ನು ಮದುವೆಯಾಗಲು ಸ್ವತಂತ್ರರಾಗುತ್ತಾರೆ.
























