ಅರ್ಬನ್ ನಕ್ಸಲರನ್ನು ಗುರುತಿಸಿ ಮುಖವಾಡವನ್ನು ಕಳಚಬೇಕು : ಪ್ರಧಾನಿ ಮೋದಿ

ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜಯಂತಿ ಕಾರ್ಯಕ್ರಮ

ಗುಜರಾತ್ : ಭಾರತದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಮತ್ತು ಜಗತ್ತಿನಲ್ಲಿ ಭಾರತ ದೇಶದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವಾರ್ಷಿಕೋತ್ಸವದಂದು ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದರು.

ಪಟೇಲ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ ನಂತರ ಏಕತಾ ಪ್ರಮಾಣ ವಚನ ಬೋಧಿಸಿ, ಕೆವಾಡಿಯಾದ ಪರೇಡ್ ಮೈದಾನದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಪರೇಡ್‌ನಲ್ಲಿ ಭಾಗವಹಿಸಿದರು. ಭಾರತದ ಮೊದಲ ಗೃಹ ಸಚಿವ ಹಾಗೂ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆ ಬಳಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ನಗರ ನಕ್ಸಲರ ನಂಟನ್ನು ಗುರುತಿಸಿ ಅದನ್ನು ಬೇರುಸಮೇತ ಕಿತ್ತೆಸೆಯುವ ಪ್ರಯತ್ನವಾಗಬೇಕು ಎಂದು ಅವರು ದೇಶದ ಜನರನ್ನು ಒತ್ತಾಯಿಸಿದರು. ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಸಮಸ್ಯೆ ಕಡಿಮೆಯಾಗುತ್ತಿದ್ದಂತೆ ಹೊಸ ಮಾದರಿಯ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ, ಒಗ್ಗಟ್ಟಾಗಿ ಇದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಹೇಳುವವರನ್ನೂ ಇಂದು ಅರ್ಬನ್ ನಕ್ಸಲರು ಟಾರ್ಗೆಟ್ ಮಾಡುತ್ತಿದ್ದಾರೆ, ನಗರ ನಕ್ಸಲರನ್ನು ಗುರುತಿಸಿ ಅವರ ಮುಖವಾಡ ಕಳಚಬೇಕಿದೆ ಎಂದರು.

ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸುವ ಜನರಿದ್ದರೂ ಸರ್ದಾರ್ ಪಟೇಲ್ ಅದನ್ನು ಸಾಧ್ಯವಾಗಿಸಿದ್ದಾರೆ ಎಂದ ಮೋದಿ, ಮುಂದಿನ ಎರಡು ವರ್ಷಗಳ ಕಾಲ ದೇಶವು ಪಟೇಲ್ ಅವರ 150ನೇ ಜಯಂತಿಯನ್ನು ಆಚರಿಸಲಿದೆ ಎಂದು ಹೇಳಿದರು.









































error: Content is protected !!
Scroll to Top