ಎರಡು ದಶಕದಿಂದ ಚೀನದಲ್ಲಿ ತಲೆಮರೆಸಿಕೊಂಡಿದ್ದ ಪಾತಕಿ
ಮುಂಬಯಿ: ಮುಂಬಯಿಯ ಭೂಗತ ಜಗತ್ತಿನ ಪಾತಕಿ ಪ್ರಸಾದ್ ಪೂಜಾರಿ ಅಲಿಯಾಸ್ ಸುಭಾಶ್ ವಿಠಲ ಪೂಜಾರಿ ಎಂಬಾತನನ್ನು ಚೀನ ಗಡೀಪಾರು ಮಾಡಿದ್ದು, ಮುಂಬಯಿ ಕ್ರೈಂ ಬ್ರಾಂಚ್ ಪೊಲೀಸರು ಮುಂಬಯಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮುಂಬಯಿಯಲ್ಲಿ ತುಳು-ಕನ್ನಡಿಗ ಹೋಟೆಲ್ ಉದ್ಯಮಿಗಳಿಂದ ಹಫ್ತಾ ವಸೂಲಿ, ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಪ್ರಸಾದ್ ಪೂಜಾರಿ ಎರಡು ದಶಕದ ಹಿಂದೆ ಚೀನಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಅಲ್ಲಿನ ಯುವತಿಯನ್ನು ಮದುವೆಯಾಗಿ ಸಂಸಾರ ಮಾಡಿಕೊಂಡಿದ್ದ. ಜೀವನ ನಿರ್ವಹಣೆಗಾಗಿ ಮೊಬೈಲ್ ಅಂಗಡಿಯಿಟ್ಟುಕೊಂಡಿದ್ದ ಆತನಿಗೆ 5 ವರ್ಷ ಪ್ರಾಯದ ಮಗ ಇದ್ದಾನೆ.
ಮುಂಬಯಿಯ ಉಪನಗರ ವಿಕ್ರೋಲಿ ಪೂರ್ವದ ಠಾಗೋರ್ ನಗರದಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಪ್ರಸಾದ್ ಪೂಜಾರಿ ಭೂಗತ ಜಗತ್ತಿನ ಪಾತಕಿಗಳ ಜತೆ ಸೇರಿಕೊಂಡು ಹಫ್ತಾ ವಸೂಲು ಮಾಡಿಕೊಂಡು ಡಾನ್ ಆಗಿದ್ದ. ಛೋಟಾ ರಾಜನ್ ಗ್ಯಾಂಗಿನ ಜತೆಗಿದ್ದ ಆತ ಛೋಟಾ ರಾಜನ್‌ನ ಬಲಗೈ ಬಂಟನಂತಿದ್ದ ಕುಮಾರ್ ಪಿಳ್ಳೆ ಜತೆ ಸೇರಿ ಪಾತಕ ಕೃತ್ಯಗಳನ್ನು ಎಸಗುತ್ತಿದ್ದ.
2002ರಲ್ಲಿ ಘಾಟ್‌ಕೋಪರ್‌ನ ಮೋನಿಕಾ ಬಾರ್ ಮಾಲಕನ ಹತ್ಯಾ ಪ್ರಕರಣದಲ್ಲಿ ಶಾಮೀಲಾಗಿದ್ದ. ಇದರಲ್ಲಿ ಇವನ ಅಣ್ಣ ಪ್ರವೀಣ್ ಪೂಜಾರಿ ಕೂಡ ಇದ್ದ. ಕ್ರೈಂ ಬ್ರಾಂಚ್ ಪೊಲೀಸರು 2002ರಲ್ಲಿ ಪ್ರಸಾದ್ ಪೂಜಾರಿ ಸಹಿತ 7 ಆರೋಪಿಗಳನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. 2008ರಲ್ಲಿ ಪ್ರವೀಣ್ ಪೂಜಾರಿಯೂ ಸೆರೆಯಾಗಿದ್ದ. ಎರಡೂವರೆ ವರ್ಷ ಜೈಲಿನಲ್ಲಿದ್ದ ಪ್ರಸಾದ್ ಪೂಜಾರಿ ನ್ಯಾಯಾಲಯದಲ್ಲಿ ಖುಲಾಸೆಗೊಂಡು ಬಿಡುಗಡೆಯಾಗಿದ್ದ. ಬಳಿಕ ವಿದೇಶಕ್ಕೆ ಹೋಗಿ ಕುಮಾರ್ ಪಿಳ್ಳೆ ಜತೆ ವ್ಯಾಪಾರದಲ್ಲಿ ಸೇರಿಕೊಂಡಿದ್ದ. ವಿದೇಶದಲ್ಲಿದ್ದುಕೊಂಡೇ ಬೆದರಿಕೆ ಕರೆಗಳನ್ನು ಮಾಡಿ ಹಫ್ತಾ ವಸೂಲು ಮಾಡುತ್ತಿದ್ದ. ನಂತರ ಪಿಳ್ಳೆ ಜತೆ ಮನಸ್ತಾಪ ಬಂದು 2012ರಲ್ಲಿ ಚೀನಕ್ಕೆ ಪಲಾಯನ ಮಾಡಿದ್ದ. ಬೀಜಿಂಗ್‌ನಲ್ಲಿ ನೆಲೆಯಾಗಿ ಅಲ್ಲಿನ ಯುವತಿಯನ್ನು ಮದುವೆಯಾಗಿದ್ದ. ಹೀಗಾಗಿ ಅವನ ಗಡಿಪಾರು ಪ್ರಕರಣ ವಿಳಂಬವಾಗಿತ್ತು. ಹತ್ತಕ್ಕೂ ಹೆಚ್ಚು ಕೊಲೆ, ಕೊಲೆಯತ್ನ ಮತ್ತು ಸುಲಿಗೆ ಪ್ರಕರಣಗಳು ಪ್ರಸಾದ್ ಪೂಜಾರಿ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯ ಅವನನ್ನು 14 ದಿನಗಳ ಮಟ್ಟಿಗೆ ಪೊಲೀಸರ ಕಸ್ಟಡಿಗೊಪ್ಪಿಸಿದೆ.








