ಕಾರ್ಕಳ : ಕಾರ್ಕಳ ಕ್ಷೇತ್ರವನ್ನು ಪ್ರವಾಸಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ, ಅದಕ್ಕೆ ಪೂರಕವಾಗಿ ಬೈಲೂರಿನ ಪರಶುರಾಮ ಥೀಂ ಪಾರ್ಕ್ ದೂರದೃಷ್ಟಿಯ ಕೊಡುಗೆ. ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಆರ್ಥಿಕ ಪ್ರಗತಿಯ ಜೊತೆಗೆ ಇಡೀ ಕ್ಷೇತ್ರವನ್ನು ಬಲಗೊಳಿಸುವ ಸಲುವಾಗಿ ಶಾಸಕ ವಿ. ಸುನಿಲ್ ಕುಮಾರ್ ಅವರು ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಥೀಂ ಪಾರ್ಕ್ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಸಿಗುವಂತಾಗಬೇಕು. ಗುಣಮಟ್ಟದ ನೆಪದಲ್ಲಿ ಅನ್ಯನ್ಯ ರೀತಿಯ ನಾಟಕಗಳನ್ನು ಮಾಡಿ ಥೀಮ್ ಪಾರ್ಕ್ ಕಾಮಗಾರಿ ಸ್ಥಗಿತಗೊಳಿಸುವ ಹುನ್ನಾರದ ವಿರುದ್ಧ ಹಾಗೂ ಕಾಮಗಾರಿ ಮುಂದುವರೆದು ಶೀಘ್ರ ಸಾರ್ವಜನಿಕರ ವೀಕ್ಷಣೆಗೆ ಸಿದ್ದಪಡಿಸುವಂತೆ ಆಗ್ರಹಿಸಿ ಕಾರ್ಕಳದಿಂದ ಬೈಲೂರಿಗೆ ಪಾದಯಾತ್ರೆಯನ್ನು ಸೆ. 23ರಂದು ಹಮ್ಮಿಕೊಳ್ಳಲಾಗಿದೆ ಎಂದು ಸುಧೀರ್ ಹೆಗ್ಡೆ ಬೈಲೂರು ತಿಳಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಉದ್ಘಾಟನೆಗೊಂಡ ಆರಂಭದ ದಿನಗಳಲ್ಲಿ ಹೊರತು ಪಡಿಸಿ ಇತರೆ ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಪ್ರಸ್ತುತ ಪರಶುರಾಮ ಥೀಂ ಪಾರ್ಕ್ ವೀಕ್ಷಣೆಗೆ ನಿಷೇಧವಿದ್ದರೂ, ಆ ಸ್ಥಳವನ್ನು ವೀಕ್ಷಿಸಲು ಈಗಲೂ ಜನ ಬರುತ್ತಿದ್ದಾರೆ. ವಾರದಂತ್ಯದ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬರುತ್ತಾರೆ. ಈ ಕಾರಣಕ್ಕೆ ಥೀಂ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಶೀಘ್ರವಾಗಿ ಸಿಗುವಂತಾಗಬೇಕು. ಥೀಂ ಪಾರ್ಕ್ ಯೋಜನೆಯು ಕಾರ್ಕಳಕ್ಕೊಂದು ಅಮೂಲ್ಯ ಕೊಡುಗೆ. ಕಾರ್ಕಳದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸುವ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದೆ. ಇದನ್ನು ಸಹಿಸದ ಕೆಲವು ವಿಘ್ನಸಂತೋಷಿಗಳು ಕಾಮಗಾರಿಗೆ ಅಡ್ಡಿ ಪಡಿಸುವ ಕೆಲಸ ಮಾಡಿ ತಡೆಯೊಡ್ಡುತ್ತಿದ್ದಾರೆ. ಬೈಲೂರು ಪರಿಸರ ಹಾಗೂ ಕಾರ್ಕಳದ ಜನತೆಯ ಆರ್ಥಿಕತೆ ಬಲವರ್ಧನೆಗೆ ಅಡ್ಡಿಯಾಗುತ್ತಿದ್ದಾರೆ. ಇದಕ್ಕೆ ಮಸಿ ಬಳಿಯುವುದಕ್ಕೆ ಯಾವ ಕಾರಣಕ್ಕೂ ನಾವು ಬಿಡುವುದಿಲ್ಲ. ಇದನ್ನು ಸಹಿಸುವುದು ಇಲ್ಲ. ಕಾಮಗಾರಿ ಮುಂದುವರಿಕೆ ಅಡ್ಡಿ ಪಡಿಸುವವರು ತಾಕತ್ತಿದ್ದರೆ ಒಳ್ಳೆಯ ಯೋಜನೆಗಳನ್ನು ತರುವ ಪ್ರಯತ್ನ ನಡೆಸಿ ಎಂದು ಸುಮಿತ್ ಶೆಟ್ಟಿ ಕೌಡೂರು ಹೇಳಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿರುವ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಕ್ಷೇತ್ರಕ್ಕೆ ತಂದಿರುವ ಒಂದೊಳ್ಳೆ ಜನಪರ ಯೋಜನೆ ಇದಾಗಿದ್ದು, ಇದಕ್ಕೆ ಅಡ್ಡಿಪಡಿಸುವುದನ್ನು ಈ ಊರಿನವರಾದ ನಾವು ಸಹಿಸೆವು. ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಇಳಿಯಲು ಸಿದ್ಧರಿದ್ದೇವೆ. ಥೀಂ ಪಾರ್ಕ್‌ಗೆ ಸಂಬಂಧಿಸಿ ಯಾವ ತನಿಖೆ ನಡೆದರೂ ಅದಕ್ಕೆ ಸಿದ್ಧನಿದ್ದೇನೆ ಎಂದು ಶಾಸಕರು ಸ್ಪಷ್ಟಪಡಿಸುತ್ತಲೇ ಇದ್ದರೂ, ಪ್ರತಿಯಾಗಿ ಟೀಕೆ ಮುಂದುವರೆಸಿರುವದನ್ನು ಸಹಿಸಲಸಾಧ್ಯ ಎಂದು ಸಂತೋಷ್ ವಾಘ್ಲೆ, ವಿಕ್ರಮ್ ಹೆಗ್ಡೆ, ಪ್ರಶಾಂತ್‌ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ರಮೇಶ್ ಕಿಣಿ, ಮಹೇಶ್ ಶೆಣೈ ಬೈಲೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.