ಹೊಸ್ಮಾರಿಗೆ ಬೇಕು ಪೊಲೀಸ್‌ ಹೊರ ಠಾಣೆ

ಕಾರ್ಕಳ : ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ, ವಿಶೇಷವಾಗಿ ಗೋಕಳ್ಳರ ಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಹೊಸ್ಮಾರಿಗೆ ಪೊಲೀಸ್‌ ಹೊರಠಾಣೆಯ ಅಗತ್ಯವಿದೆ. ಕಾರ್ಕಳ ನಗರದಲ್ಲೇ ಗ್ರಾಮಾಂತರ ಪೊಲೀಸ್‌ ಠಾಣೆಯಿರುವುದರಿಂದ ಕಾರ್ಕಳ ಗಡಿಪ್ರದೇಶವಾದ ಹೊಸ್ಮಾರು, ಮಾಳ, ನೂರಾಲ್‌ ಬೆಟ್ಟು, ರೆಂಜಾಳ, ಇರ್ವತ್ತೂರು ಪ್ರದೇಶದಲ್ಲಿ ಯಾವುದೇ ಘಟನೆ, ಅನಾಹುತ, ಅಪರಾಧ ಕೃತ್ಯವಾದಲ್ಲಿ ಕಾರ್ಕಳದಿಂದಲೇ ಪೊಲೀಸರು ಅಲ್ಲಿಗೆ ತೆರಳಬೇಕಾದ ಅನಿರ್ವಾಯತೆಯಿದೆ.
ಕಾರ್ಕಳದಿಂದ ಹೊಸ್ಮಾರಿಗೆ ತೆರಳುವ ರಸ್ತೆಯು ಕಾಡುಪ್ರದೇಶದಿಂದ ಕೂಡಿದ್ದು, ರಾತ್ರಿ ವೇಳೆ ಅನಾಹುತ ನಡೆದಲ್ಲಿ ತುರ್ತಾಗಿ ಬೈಕ್‌ ನಲ್ಲಿ ಸಾಗುವುದು ಬಹಳ ಕಷ್ಟದ ಕಾರ್ಯ. ಪೊಲೀಸರು ರಾತ್ರಿ ಗಸ್ತು ನಡೆಸಲು ಸುಮಾರು 15ರಿಂದ 20 ಕಿ.ಮೀ. ಸಾಗಬೇಕಾದ ಸನ್ನಿವೇಶ.

ಅನುಕೂಲ
ಹೊಸ್ಮಾರಿನಲ್ಲಿ ಹೊರಠಾಣೆಯಾದಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಹೊರೆ ಕಡಿಮೆಯಾಗಲಿದೆ. ಓರ್ವ ಎಎಸ್‌ಐ, ಮೂರರಿಂದ ನಾಲ್ವರು ಹೆಡ್‌ ಕಾನ್‌ಸ್ಟೇಬಲ್‌, ಐವರಿಂದ ಆರು ಮಂದಿ ಕಾನ್‌ಸ್ಟೇಬಲ್‌ ಹುದ್ದೆ ದೊರೆತು ಸ್ಥಳೀಯವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ‍ಹೊಸ್ಮಾರಿನಲ್ಲಿ ಚೆಕ್‌ ಪೋಸ್ಟ್‌ಗೆಂದು ಈಗಾಗಲೇ ಇಲಾಖೆ ವತಿಯಿಂದಲೇ ಕಟ್ಟಡವೊಂದು ನಿರ್ಮಾಣವಾಗಿದ್ದು ಆ ಕಟ್ಟಡವನ್ನೇ ಹೊರಠಾಣೆಯಾಗಿ ಮಾರ್ಪಡಿಸಬಹುದಾಗಿದೆ.

ಓಬಿರಾಯನ ಕಾಲದ ಜೀಪು
ಪ್ರಸ್ತುತ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಜೀಪು ಬಹಳ ಹಳೆಯದು. ಇದರಲ್ಲಿ ದನಕಳ್ಳರನ್ನು ಬೆನ್ನಟ್ಟಿ ಹಿಡಿಯುವುದು ಸಾಹಸವೇ ಸರಿ. ಗೋಕಳ್ಳರು ಹೊಸ ಮಾದರಿಯ ಕಾರಿನಲ್ಲಿ ದನ ತುಂಬಿಸಿ ಸಾಗಾಟ ನಡೆಸುತ್ತಿದ್ದರೆ, ಅದನ್ನು ಪೊಲೀಸರು ಓಬಿರಾಯನ ಕಾಲದ ಜೀಪಿನಲ್ಲಿ ಬೆನ್ನಟ್ಟುವ ದುಸ್ಥಿತಿಯಿದೆ.

ಪ್ರಸ್ತಾವನೆಯಿತ್ತು
ಈ ಹಿಂದೆ ಕಾರ್ಕಳದಲ್ಲಿ ನಕ್ಸಲ್‌ ಚಟುವಟಿಕೆಯಿದ್ದ ಸಂದರ್ಭದಲ್ಲಿ ಬಜಗೋಳಿಯಲ್ಲಿ ಹೊಸ ಪೊಲೀಸ್‌ ಠಾಣೆ ತೆರೆದು ಕಾರ್ಕಳದಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಬೆಳ್ಮಣ್‌ಗೆ ಸ್ಥಳಾಂತರಿಸುವ ಪ್ರಸ್ತಾವನೆಯಿತ್ತು. ಇದು ಅತ್ಯಂತ ಸೂಕ್ತವಾದ ತೀರ್ಮಾನವಾಗಿತ್ತಾದರೂ ಮುಂದಿನ ದಿನಗಳಲ್ಲಿ ಇದು ಕೈಗೂಡಲೇ ಇಲ್ಲ. ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಹೊಂದಿಕೊಂಡಂತೆಯೇ ಗ್ರಾಮಾಂತರ ಠಾಣೆಯಿರುವುದು ಹಾಸ್ಯಾಸ್ಪದ ಸಂಗತಿಯೇ ಸರಿ.

ದನಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ಹೊಸ್ಮಾರು, ಮಾಳ ಭಾಗದಲ್ಲಿ ಪೊಲೀಸ್ ಗಸ್ತು ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸುವ ಹಿನ್ನೆಲೆಯಲ್ಲಿ ಹೊಸ್ಮಾರಿನಲ್ಲಿ ಹೊರಠಾಣೆ ತೆರೆಯುವ ಪ್ರಸ್ತಾಪವಿದೆ.

ವಿ. ಸುನಿಲ್‌ ಕುಮಾರ್‌
ಸಚಿವರು

ಹೊಸ್ಮಾರಿನಲ್ಲಿ ಈಗಾಗಲೇ ಚೆಕ್‌ ಪೋಸ್ಟ್‌ ಇದೆ. ಹೊರ ಠಾಣೆ ಬೇಡಿಕೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಎನ್. ವಿಷ್ಣುವರ್ಧನ್‌
ಎಸ್‌ಪಿ, ಉಡುಪಿ

ಹೊಸ್ಮಾರುವಿನಿಂದ ಕಾರ್ಕಳ ಸಂಪರ್ಕಿಸಲು ಸುಮಾರು 20 ಕಿ.ಮೀ. ದೂರವಿದೆ. ಹೀಗಾಗಿ ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟಂತೆ ದೂರು ನೀಡಲು ಕಾರ್ಕಳ ಅವಲಂಬಿಸಬೇಕಿದೆ. ಹೊಸ್ಮಾರಿನಲ್ಲಿ ಹೊರಠಾಣೆ ತೆರೆದಲ್ಲಿ ದನಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

ಗಂಗಾಧರ ಈದು
ಸಾಮಾಜಿಕ ಮುಂದಾಳು































































































































































































































error: Content is protected !!
Scroll to Top