ಕಾರ್ಕಳ : ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಕಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ನಡೆಯಬಾರದು. ಕಾನೂನಿಗೆ ಧಕ್ಕೆ ತರುವಂತಹ ಕಾರ್ಯಕ್ಕೆ ಯಾರು ಮುಂದಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು, ಧಾರ್ಮಿಕ ಮುಖಂಡರು ಸಹಕಾರ ನೀಡಬೇಕೆಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ ಹೇಳಿದರು.
ಅವರು ಫೆ. 11ರಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಜಾಬ್ ಕುರಿತಾಗಿ ಧಾರ್ಮಿಕ ಮುಖಂಡರೊಂದಿಗೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಮೊಬೈಲ್ ಬಗ್ಗೆ ನಿಗಾವಿರಲಿ
ವಿದ್ಯಾರ್ಥಿಗಳ ಮೊಬೈಲ್, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಕುರಿತು ಪೋಷಕರು ನಿಗಾ ವಹಿಸಬೇಕು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ವಿಚಾರವಿದ್ದರೂ ತಕ್ಷಣಕ್ಕೆ ನಮ್ಮ ಗಮನಕ್ಕೆ ತರುವಂತೆ ತೇಜಸ್ವಿ ಅವರು ಮನವಿ ಮಾಡಿಕೊಂಡರು.
ಕಾರ್ಕಳ ಶಾಂತಿ, ಸಾಮರಸ್ಯದ ಊರು
ಕಾರ್ಕಳ ಅತ್ಯಂತ ಶಾಂತಿ, ಸಾಮರಸ್ಯದ ಊರೆಂದು ಗುರುತಿಸಿಕೊಂಡಿದೆ. ಈ ಹಿರಿಮೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವೆಂದು ನಗರ ಪೊಲೀಸ್ ಠಾಣೆಯ ಎಸ್‌ಐ ಪ್ರಸನ್ನ ಎಂ.ಎಸ್. ಹೇಳಿದರು.
ಪುರಸಭಾ ಸದಸ್ಯ ಅಸ್ಪಕ್ ಅಹಮ್ಮದ್ ಮಾತನಾಡಿ, ವಿದ್ಯಾದೇಗುಲದಲ್ಲಿ ವಿಷ ಬೀಜ ಬಿತ್ತುವ ಕಾರ್ಯವಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಕಾರ್ಕಳದಲ್ಲಿ ಯಾವೊಂದು ಅಹಿತಕರ ಘಟನೆ ನಡೆಯದಂತೆ ಹಿರಿಯರು ನೋಡಿಕೊಳ್ಳಬೇಕೆಂದರು.
ನಗರ ಠಾಣೆ ಅಪರಾಧ ವಿಭಾಗದ ಎಸ್‌ಐ ದಾಮೋದರ್, ಗ್ರಾಮಾಂತರ ಠಾಣೆಯ ಎಸ್‌ಐ ಜನಾರ್ದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
