ಕಾರ್ಕಳ : ಮುಂಡ್ಲಿ ಜಲಾಶಯದಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ತುಂಬಿದ್ದರೂ ಗೇಟ್ ತೆರವುಗೊಳಿಸದೇ ಇರುವ ಬಂದ ದೂರಿನ ಮೇರೆಗೆ ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ ಆ. 8ರಂದು ದೀಢೀರ್ ಆಗಿ ಸ್ಥಳಕ್ಕೆ ಭೇಟಿ ನೀಡಿ ಗೇಟ್ ತೆರವುಗೊಳಿಸಿದರು. ಜಲಾಶಯ ನಿರ್ವಹಣೆ ಮಾಡುತ್ತಿರುವ ಜಿವಿಆರ್ ಇನ್‌ಫ್ರಪ್ರಾಜೆಕ್ಟ್ ಕಂಪನಿಯವರು ನೀರು ಹರಿಯಲು ಇರುವ 4 ಗೇಟ್‌ಗಳ ಪೈಕಿ ಕೇವಲ 2 ಗೇಟ್ ಮಾತ್ರ ತೆರವುಗೊಳಿಸಿದ್ದು, ಮತ್ತೆರೆಡು ಗೇಟ್ ಹಾಗೆಯೇ ಬಿಟ್ಟು ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವಂತೆ ಮಾಡಿದ್ದರು. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಸ್ಥಳೀಯರ ತೋಟದಲ್ಲಿ ನೆರೆ ನೀರು ತುಂಬಿತ್ತು. ಮನೆಗಳಿಗೂ ತೊಂದರೆಯಾಗುವ ಅಪಾಯಕಾರಿ ಮಟ್ಟಕ್ಕೇರಿತು. ಹೀಗಾಗಿ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಗೇಟ್ ತೆರವುಗೊಳಿಸಿದರು.
ತರಾಟೆಗೆತ್ತಿಕೊಂಡ ತಹಶೀಲ್ದಾರ್
ನೀರು ಅಪಾಯಕಾರಿ ಮಟ್ಟ ತಲುಪುವ ಮುಂಚೆ ಗೇಟ್ ತೆರವುಗೊಳಿಸುವಂತೆ ಪುರಸಭೆಗೆ ಮನವಿ ನೀಡಲಾಗಿದೆ. ಗ್ರಾ.ಪಂ.ವತಿಯಿಂದ ಕೂಡ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಆದರೂ, ಜಿವಿಆರ್ ಕಂಪನಿಯವರು ಗೇಟ್ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ತಹಶೀಲ್ದಾರ್ ಗಮನಕ್ಕೆ ತಂದಾಗ ಜಿವಿಆರ್ ಮುಖ್ಯಸ್ಥರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು. ಪ್ರಾಕೃತಿಕ ವಿಕೋಪದಿಂದ ಕೃಷಿ ಹಾನಿಯಾದಲ್ಲಿ ಸರಕಾರದಿಂದ ಪರಿಹಾರ ದೊರೆಯಬಹುದು. ಆದರೆ, ಜೀವಹಾನಿಯಾದಲ್ಲಿ ಮತ್ತೆ ಜೀವ ತಂದುಕೋಡೋಕೆ ಸಾಧ್ಯವಾಗುತ್ತದೆಯೇ ? ಎಂದು ಪುರಂದರ ಹೆಗ್ಡೆ ಕಂಪನಿಯವರನ್ನು ತರಾಟೆಗೆತ್ತಿಕೊಂಡರು. ಈ ಸಂದರ್ಭ ಪುರಸಭಾ ಅಧಿಕಾರಿಗಳು, ಅಜೆಕಾರು ಠಾಣಾ ಪೊಲೀಸರು, ದುರ್ಗಾ ಗ್ರಾ.ಪಂ. ಪಿಡಿಒ ಸಿಬ್ಬಂದಿ ಉಪಸ್ಥಿತರಿದ್ದರು.