ಕ್ಯಾಂಡಿಡೇಟ್ಸ್ ಜಾಗತಿಕ ಚೆಸ್ ಟೂರ್ನಿ ಗೆದ್ದ ದೊಮ್ಮರಾಜು ಗುಕೇಶ್

ಆತನ ವಯಸ್ಸು ಇನ್ನೂ 17 ವರ್ಷ. ಮೌನದ ಮೂಲಕ ಜಗತ್ತನ್ನು ಗೆಲ್ಲಲು ಹೊರಟ ಆತನ ತೀಕ್ಷ್ಣ ಕಣ್ಣುಗಳು ಈಗಲೇ ವಿಶ್ವ ವಿಜಯಿಯಾಗುವ ಕನಸಿನಿಂದ ತುಂಬಿವೆ. ಹಿಂದೊಮ್ಮೆ ವಿಶ್ವ ಚಾಂಪಿಯನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಇದೇ ಹುಡುಗ ಸೋಲಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ಆತನನ್ನು ಗಮನಿಸಿತ್ತು.
ಈಗ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತಾಗ ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ.ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ. ಚೆನ್ನೈ ಮೂಲದ ಗುಕೇಶ್ ವಿಶ್ವ ಚಾಂಪಿಯನ್ ಆಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

ಆ ಹುಡುಗನ ಹೆಸರು ಡಿ.ಗುಕೇಶ್

ಆತ ಚೆನ್ನೈಯ ಪ್ರತಿಭೆ. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆದ ನಂತರ ನಿವೃತ್ತಿ ಪಡೆದು ಚೆನ್ನೈಯಲ್ಲಿ ವಿಶ್ವನಾಥನ್ ಆನಂದ ಚೆಸ್ ಆಕಾಡೆಮಿ (WACA)ಯನ್ನು ಸ್ಥಾಪನೆ ಮಾಡಿದ್ದರು. ಅದರಿಂದ ಸ್ಫೂರ್ತಿ ಪಡೆದು ಚೆನ್ನೈಯಲ್ಲಿ ಈಗ 60ಕ್ಕಿಂತ ಅಧಿಕ ಚೆಸ್ ಅಕಾಡೆಮಿಗಳು ಇವೆ. ಅದರ ಪರಿಣಾಮವಾಗಿ ಇದೀಗ ಚೆನ್ನೈ ನಗರವು ಭಾರತದ ಚೆಸ್ ರಾಜಧಾನಿ ಆಗಿ ಬೆಳೆದಿದೆ. ಅತಿ ಸಣ್ಣ ವಯಸ್ಸಿನಲ್ಲಿ ಗ್ರಾನ್ ಮಾಸ್ಟರ್ ಆದ ಆರ್.ಪ್ರಜ್ಞಾನಂದ, ಆರ್.ವೈಶಾಲಿ, ಸುಬ್ಬರಾಮನ್ ವಿಜಯಲಕ್ಷ್ಮಿಇವರೆಲ್ಲರೂ ಚೆನ್ನೈಯವರು. ಈ ಪಟ್ಟಿಗೆ ಈಗ ಹೊಳೆಯುವ ಪ್ರತಿಭೆ ಸೇರ್ಪಡೆ ಆಗಿದೆ. ಆತ ಡಿ.ಗುಕೇಶ್. ಭಾರತದ ಒಟ್ಟು ಚೆಸ್ ಗ್ರಾನ್ ಮಾಸ್ಟರಗಳಲ್ಲಿ ಶೇ.35 ಆಟಗಾರರು ಚೆನ್ನೈಗೆ ಸೇರಿದವರು ಅನ್ನುವಾಗ ಆ ನಗರದ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಾಲ್ಯದಿಂದಲೇ ಚೆಸ್ ಆಟಕ್ಕೆ ಸಮರ್ಪಣೆ ಆಗಿ ಬೆಳೆದ ಹುಡುಗ ಆತ. ಅದಕ್ಕಾಗಿ ತನ್ನ ಬಾಲ್ಯದ ಆಟ, ಶಾಲೆ, ತುಂಟಾಟ ಎಲ್ಲವನ್ನೂ ಬದಿಗೆ ಇಟ್ಟು ಹೋರಾಟಕ್ಕೆ ಇಳಿದವನು.

ಮಗನಿಗಾಗಿ ಅಪ್ಪ, ಅಮ್ಮ ಮಾಡಿದ ತ್ಯಾಗ

ಅವನ ತಂದೆ ಡಾ.ರಜಿನಿಕಾಂತ್ ನಗರದ ಪ್ರಸಿದ್ಧ ENT ಸರ್ಜನ್. ತಾಯಿ ಡಾ. ಪದ್ಮಕುಮಾರಿ ಕೂಡ ಮೈಕ್ರೋಬಯೊಲಜಿ ತಜ್ಞರು. ಇಬ್ಬರೂ ತಮ್ಮ ಮಗನಿಗಾಗಿ ತಮ್ಮ ಪ್ರಾಕ್ಟೀಸ್ ಮರೆತು ಜಗತ್ತಿನಾದ್ಯಂತ ಓಡಾಡಿದ್ದಾರೆ. ತರಬೇತಿಗಾಗಿ ತುಂಬಾ ದುಡ್ಡು ಖರ್ಚು ಮಾಡಿದ್ದಾರೆ. ತುಂಬಾ ಸಮಯ ಕೊಟ್ಟಿದ್ದಾರೆ. ಮಗನ ಚೆಸ್ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದಾರೆ.
ಹುಡುಗನೂ ನಾಲ್ಕನೇ ತರಗತಿಯಿಂದ ಶಾಲೆಗೆ ಹೋಗದೆ ಚೆಸ್ ಆಟದಲ್ಲಿ ಮೈ ಮರೆತಿದ್ದಾನೆ. ಶಾಲಾ ಶಿಕ್ಷಣಕ್ಕೆ ಸಮಯ ದೊರೆಯದ ಬಗ್ಗೆ ಹೆತ್ತವರಿಗೆ ಬೇಸರ ಇದೆ. ಆದರೆ ಆತನು 12ನೆಯ ವಯಸ್ಸಿಗೆ ಚೆಸ್ ಗ್ರಾನ್ ಮಾಸ್ಟರ್ ಹುದ್ದೆಗೆ ಏರಿದಾಗ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಮುಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲಸನ್ ಅವರನ್ನು ಆತನು ಸೋಲಿಸಿದಾಗ ತುಂಬಾ ಖುಷಿ ಪಟ್ಟಿದ್ದಾರೆ. ಮ್ಯಾಗ್ನೆಸನನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಗುಕೇಶ್ ಅನ್ನುವುದು ಸದ್ಯಕ್ಕೆ ಅಳಿಸಲಾಗದ ದಾಖಲೆ.

ಸಾಂಪ್ರದಾಯಕ ಚೆಸ್ ಕಲಿಕೆ, ಅಹಂಕಾರದಿಂದ ದೂರ

ಸಾಮಾನ್ಯವಾಗಿ ಇತ್ತೀಚಿನ ಚೆಸ್ ಕಲಿಯುವ ಮಕ್ಕಳು ಕಂಪ್ಯೂಟರ್ ಜೊತೆ ಕೂತು ಚೆಸ್ ಆಡುತ್ತಾರೆ. ಆದರೆ ಗುಕೇಶ್ ಚೆಸ್ ಕಲಿತದ್ದು ಸಾಂಪ್ರದಾಯಿಕ ವಿಧಾನದಲ್ಲಿ. ಗುರುಗಳು ಹೇಳಿದ್ದನ್ನು ನೂರಕ್ಕೆ ನೂರರಷ್ಟು ಪಾಲಿಸುವ ಅವನ ಶ್ರದ್ಧೆ, ಏಕಾಗ್ರತೆ, ಬದ್ಧತೆ ಅವನನ್ನು ಪ್ರತಿ ಹೆಜ್ಜೆಯಲ್ಲಿಯೂ ಗೆಲ್ಲಿಸುತ್ತಿವೆ. ಯಾರಾದರೂ ಸನ್ಮಾನಕ್ಕೆ, ಸಂವಾದಕ್ಕೆ ಕರೆದರೆ ಆತ ನಯವಾಗಿ ನೋ ಅನ್ನುವುದನ್ನು ಕಲಿತಿದ್ದಾನೆ. ಪ್ರಚಾರದಿಂದ ಆತ ಗಾವುದ ದೂರ ಓಡುತ್ತಾನೆ. ತಾನಾಯಿತು, ತನ್ನ ಅಭ್ಯಾಸವಾಯಿತು ಎಂದು ಚೆಸ್ ಆಟದಲ್ಲಿ ಮುಳುಗಿ ಬಿಡುವ ನಾಚಿಕೆಯ ಹುಡುಗ ಗುಕೇಶ್.

ಪ್ರಶಸ್ತಿ ಗೆದ್ದಾಗ ನಿನಗೆ ಹೇಗನ್ನಿಸಿತು ಹುಡುಗ? ಎಂದು ಕೇಳಿದಾಗ ‘ನನ್ನ ಗೆಲುವಿಗಿಂತ ದೇಶವನ್ನು ರೆಪ್ರೆಸೆಂಟ್ ಮಾಡುವ ಅವಕಾಶ ದೊರೆತದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ’ ಅನ್ನುತ್ತಾನೆ.

ನಿನ್ನ ಭವಿಷ್ಯದ ಗುರಿ ಏನು ಎಂದು ಯಾರೋ ಕೇಳಿದಾಗ ‘ನನಗೆ ವಿಶಿ ಸರ್ (ವಿಶ್ವನಾಥನ್ ಆನಂದ್) ಅವರು ಏನು ಹೇಳುತ್ತಾರೆಯೋ ಆ ಪ್ರಕಾರ ಮಾಡುತ್ತೇನೆ. ನನಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ’ ಅನ್ನುತ್ತಾನೆ.
ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನಗೆ ಈಗ ಒಳ್ಳೆಯ ಶಿಷ್ಯ ದೊರೆತ ಖುಷಿಯಲ್ಲಿ ಇದ್ದಾರೆ.























































































































































error: Content is protected !!
Scroll to Top