ವಿದ್ಯುತ್‌ ಶುಲ್ಕ ಏರಿಕೆ : ಇಂದು, ನಾಳೆ ಬಿಜೆಪಿ ಪ್ರತಿಭಟನೆ

ಉಚಿತ ವಿದ್ಯುತ್‌ಗೆ ಷರತ್ತು, ಹಾಲಿನ ಪ್ರೋತ್ಸಾಹ ಧನ ಕಡಿತಕ್ಕೆ ವಿರೋಧ

ಬೆಂಗಳೂರು: ಉಚಿತ ವಿದ್ಯುತ್‌ ಪಡೆಯಲು ಷರತ್ತು ಹಾಕಿರುವುದನ್ನು ವಿರೋಧಿಸಿ ಬಿಜೆಪಿ ಎರಡು ದಿನ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸರ್ಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್‌ ಪಡೆಯಲು ಆಗ್ರಹಿಸಿ ಬಿಜೆಪಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.
200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಎಂದಿದ್ದ ಕಾಂಗ್ರೆಸ್‌ ಪಕ್ಷ ಈಗ ಷರತ್ತು ವಿಧಿಸಿರುವುದು, ವಿದ್ಯುತ್‌ ಶುಲ್ಕ ಹೆಚ್ಚಿಸಿರುವುದು ಹಾಗೂ ಹಾಲಿನ ಪ್ರೋತ್ಸಾಹ ಧನ ಕಡಿಮೆಗೊಳಿಸುವ ನಿರ್ಧಾರಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
ಈ ಮುಂಚೆ ಮನೆಗಳಲ್ಲಿ ಪ್ರತಿ ತಿಂಗಳು 70 ಯುನಿಟ್‌ ವಿದ್ಯುತ್‌ ಬಳಸುತ್ತಿದ್ದರೆ 80 ಯುನಿಟ್‌ ಬಳಸಿ. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್‌ ಮೀರುವಂತಿಲ್ಲ ಎಂಬ ಷರತ್ತು ಅಥವಾ ನಿಬಂಧನೆಯನ್ನು ಸರ್ಕಾರ ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯುನಿಟ್‌ ಎಂದಿದ್ದೀರಲ್ಲವೇ? ಆ ಮಾತನ್ನು ನಡೆಸಿಕೊಡದೆ ಮಾತು ತಪ್ಪಿದವರು ಅಥವಾ ವಚನ ಭ್ರಷ್ಟತೆ ಆದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಿದ್ಯುತ್‌ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯುನಿಟ್‌ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯುನಿಟ್‌ಗೆ 56 ರು. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರ್ಕಾರ ಮಾಡಿದ್ದೇನು? ಸರ್ಕಾರ ಒಂದೆಡೆ ಉಚಿತ ಎನ್ನುತ್ತದೆ ಇನ್ನೊಂದಡೆ ಶುಲ್ಕ ಹೆಚ್ಚಿಸಿ ಜನರಿಂದಲೇ ವಸೂಲು ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್‌ ಪಡೆಯಲು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5 ರೂ.ಗೆ ಬಿಜೆಪಿ ಸರ್ಕಾರ ಹೆಚ್ಚಿಸಿತ್ತು. ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು ಎಂದು ಕೇಳಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ನೀಡಬೇಕು ಎಂದು ರವಿಕುಮಾರ್‌ ಆಗ್ರಹಿಸಿದ್ದಾರೆ.





























































































































































































































error: Content is protected !!
Scroll to Top