ಗ್ಯಾರಂಟಿಯಿಂದ ಕುಟುಂಬಕ್ಕೆ ವಾರ್ಷಿಕ 1 ಲ.ರೂ. ಲಾಭ, ಬೊಕ್ಕಸಕ್ಕೆ 60 ಸಾವಿರ ಕೋ. ರೂ. ಹೊರೆ

ವಿವಿಧ ತೆರಿಗೆ, ಸೆಸ್‌ ಹೆಚ್ಚಳವಾಗುವ, ಯೋಜನೆಗಳಿಗೆ ಅನುದಾನ, ಸಬ್ಸಿಡಿ ಕಡಿತವಾಗುವ ಸಾಧ್ಯತೆ

ಬೆಂಗಳೂರು : ಸರ್ಕಾರ ನೀಡಲಿರುವ ಎಲ್ಲ ಐದು ಗ್ಯಾರಂಟಿಗಳಿಗೆ ಒಂದು ಕುಟುಂಬ ಫಲಾನುಭವಿಯಾದರೆ ವಾರ್ಷಿಕ 1 ಲಕ್ಷ ರೂ.ಗೂ ಅಧಿಕ ಲಾಭ ಪಡೆಯಲಿದೆ. ಆದರೆ ಇದೇ ವೇಳೆ ಸರಕಾರದ ಬೊಕ್ಕಸದ ಮೇಲೆ ಸುಮಾರು 60 ಸಾವಿರ ಕೋ ರೂ. ಹೊರೆ ಬೀಳಲಿದೆ.
ಗೃಹಜ್ಯೋತಿ ಅಡಿ ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಾಸಿಕ 1,550 ರೂ. ಗರಿಷ್ಠ ವಿದ್ಯುತ್‌ ಶುಲ್ಕದಿಂದ ವಿನಾಯಿತಿ ಪಡೆಯಬಹುದು. ಈ ಮೂಲಕ ವರ್ಷಕ್ಕೆ 18,600 ರೂ. ಗರಿಷ್ಠ ಲಾಭ ಪಡೆಯಬಹುದು. ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿ ಮಾಸಿಕ 2 ಸಾವಿರ ರೂ.ಯಂತೆ ವಾರ್ಷಿಕ 24 ಸಾವಿರ ರೂ. ಪಡೆಯಲಿದ್ದಾರೆ.
ಅನ್ನಭಾಗ್ಯ ಅಡಿ ಪ್ರತಿ ಕುಟುಂಬಕ್ಕೆ ಸರಾಸರಿ 50 ಕೆ.ಜಿ.ಯಂತೆ ವರ್ಷಕ್ಕೆ 600 ಕೆ.ಜಿ. ಆಹಾರ ಧಾನ್ಯ ಪೂರೈಕೆಯಾಗಲಿದೆ. ಪ್ರತಿ ಕೆ.ಜಿ.ಗೆ. 40 ರೂ.ಯಂತೆ 24,000 ರೂ. ಮೌಲ್ಯದ ಆಹಾರ ಧಾನ್ಯ ಕುಟುಂಬಕ್ಕೆ ಸಿಗಲಿದೆ.
ಯುವನಿಧಿ ಯೋಜನೆಯಡಿ ಪದವಿ ಪಡೆದವರಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ಮಾಸಿಕ 3 ಸಾವಿರ ರು. ಪಡೆಯುವವರಿಗೆ ವಾರ್ಷಿಕ 36,000 ರೂ. ದೊರೆಯಲಿದೆ. ಈ ನಾಲ್ಕೂ ಯೋಜನೆಗಳಿಂದಲೇ ನಾಲ್ಕು ಯೋಜನೆ ಅನ್ವಯವಾಗುವವರಿಗೆ ಗರಿಷ್ಠ 1.02 ಲಕ್ಷ ರು. ಲಾಭ ಸಿಗಲಿದೆ.
ಮನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಲಾಭ ಹಣದ ರೂಪದಲ್ಲಿ ಲೆಕ್ಕಾಚಾರ ಕಷ್ಟವಾದರೂ ತಕ್ಕ ಮಟ್ಟಿಗೆ ಲಾಭ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ 60 ಸಾವಿರ ಕೋಟಿ ಹೊರೆ

ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷವೊಂದಕ್ಕೆ ಸುಮಾರು 60 ಸಾವಿರ ಕೋಟಿ ರೂ. ಹೊರೆ ಬೀಳುವ ಅಂದಾಜು ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಮಟ್ಟದಲ್ಲಿ ನಡೆದಿರುವ ಅನಗತ್ಯ ಖರ್ಚು, ದುಂದುವೆಚ್ಚ ಕಡಿವಾಣ ಹಾಗೂ ನಿಷ್ಪ್ರಯೋಜಕವಾದ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಿ ಈ ನಷ್ಟ ಭರಿಸಿಕೊಳ್ಳುವ ಸಾಧ್ಯತೆಯಿದೆ. ಜತೆಗೆ ಕೆಲವು ವಸ್ತುಗಳ ಮೇಲೆ ತೆರಿಗೆ, ಸೆಸ್‌, ಇತ್ಯಾದಿ ಹೆಚ್ಚಳವಾಗುವ ಸಾಧ್ಯತೆಯಿದೆ.





























































































































































































































error: Content is protected !!
Scroll to Top