ಉಕ್ರೇನ್ ಯುದ್ಧ ಭಾರತದ ಮೇಲೂ ಪರಿಣಾಮ ಬೀರಬಹುದು : ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಚಿತ್ರದುರ್ಗ: ರಷ್ಯಾ–ಉಕ್ರೇನ್‌ ಯುದ್ಧದ ಬೆಂಕಿಯ ಬಿಸಿ ನಮಗೂ ತಟ್ಟಲಾರಂಭಿಸಿದ್ದು, ಈ ಜ್ವಾಲೆಯ ಕಿಡಿ ಹಾರಿದರೆ ಇನ್ನಷ್ಟು ಅಪಾಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಯುದ್ಧ ಉಕ್ರೇನ್‌ನಲ್ಲಿ ಮಾತ್ರವಲ್ಲ ಪಕ್ಕದ ಎಲ್ಲಾ ದೇಶಗಳೂ ಅದರ ಪರಿಣಾಮವಾಗಿ ಇಂಧನದ ಬೆಲೆ ಹೆಚ್ಚಾಗಿ, ಜನಜೀವನದ ಮೇಲೆ ಪರಿಣಾಮ ಬೀರಬಹುದು. ಯುದ್ಧಪೀಡಿತ ಉಕ್ರೇನ್‌ ದೇಶದಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಅವರನ್ನ ಕರೆತರುವ ಪ್ರಯತ್ನ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವಾಗಿದೆ. ಯುದ್ಧ ನಡೆಯುವ ಸಂಭವ ಕಡಿಮೆ ಎಂಬ ಕಾರಣಕ್ಕೆ ಅನೇಕರು ಅಲ್ಲೇ ಇದ್ದರು. ಯುದ್ಧ ಘೋಷಣೆಯಾಗುವ ಮೊದಲೇ ಹೊರಟಿದ್ದರೆ ಅನುಕೂಲವಾಗುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದರು.
ಸೋವಿಯತ್‌ ಒಕ್ಕೂಟವನ್ನು ಮತ್ತೆ ರಚಿಸುವುದು ರಷ್ಯಾಯ ಉದ್ದೇಶ ಇರಬಹುದು. ಉಕ್ರೇನ್‌ ನೆರೆಯ ರಾಷ್ಟ್ರಗಳಿಗೂ ಯುದ್ಧ ವಿಸ್ತರಿಸಿದರೆ ಗಡಿ ಭಾಗದಲ್ಲಿರುವ ಹಾಗೂ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿರುವ ಭಾರತೀಯರಿಗೆ ಇನ್ನಷ್ಟು ತೊಂದರೆ ಆಗಬಹುದು. ಉಕ್ರೇನ್‌ ಸುತ್ತಲಿನ ದೇಶಗಳೂ ಸೇರಿ ಇಡೀ ವಿಶ್ವವೇ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ನಾವು ತಕ್ಷಣದ ಕದನ ವಿರಾಮ ಮತ್ತು ಜಗತ್ತಿನಲ್ಲಿ ಶಾಂತಿಗಾಗಿ ಪ್ರಾರ್ಥಿಸಬೇಕು, ಏಕೆಂದರೆ ಇದು ಮಾನವೀಯತೆಯ ಉಳಿವಿಗಾಗಿ ಏಕೈಕ ಪರಿಹಾರವಾಗಿದೆ.” ಎಂದು ಡಾ. ವೀರೆಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಈ ಸಮಯದಲ್ಲಿ ಮಾಡಬೇಕಾದ ಉತ್ತಮ ಕೆಲಸವೆಂದರೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಆದಷ್ಟು ಬೇಗ ಸ್ಥಳಾಂತರಿಸುವುದು, ಉಕ್ರೇನ್‌ನಲ್ಲಿರುವ ಇತರ ವಿದೇಶಿ ಪ್ರಜೆಗಳೊಂದಿಗೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿರಿಸಬೇಕು. ಭಾರತೀಯ ವೈದ್ಯಕೀಯ ವಿದ್ಯಾರ್ಥಿ ನವೀನ ಶೇಖರಪ್ಪ ಗ್ಯಾನಗೌಡರ ನಿಧನಕ್ಕೆ ಹೆಗ್ಗಡೆ ಸಂತಾಪ ಸೂಚಿಸಿದರು.





























































































































































































































error: Content is protected !!
Scroll to Top