ಕಾರ್ಕಳ ಪುರಸಭೆ ಸಾಮಾನ್ಯ ಸಭೆ

ಪ್ರಾಧಿಕಾರದ ನಿಯಮಾವಳಿ ಸರಳೀಕರಣಕ್ಕೆ ಸದಸ್ಯರ ಆಗ್ರಹ

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ, ಮನೆ ನವೀಕರಣ ವಿಚಾರದಲ್ಲಿ ಪ್ರಾಧಿಕಾರದ ಕಠಿಣ ನಿಯಮಾವಳಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನಿಯಮಾವಳಿಗಳನ್ನು ಸಡಿಲಿಕೆ ಮಾಡಬೇಕೆಂದು ಪುರಸಭಾ ಸದಸ್ಯರು ಆಗ್ರಹಿಸಿದರು. ಪುರಸಭಾಧ್ಯಕ್ಷೆ ಸುಮಾ ಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದ ನೂರಾರು ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದ್ದಿದ್ದು, ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದರು. ಕರಿಯಲ್ಲು ಎಂಬಲ್ಲಿ ಪುರಸಭೆಯು ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಿಸಿದ್ದು ಅಲ್ಲಿ ಪುರಸಭೆಯ ಗಮನಕ್ಕೆ ತಾರದೇ ನಿಯಮಬಾಹಿರವಾಗಿ ಸಮಿತಿ ರಚಿಸಲಾಗಿದೆ. ಪುರಸಭೆಯ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಲಾಗಿರುವುದರಿಂದ ಪುರಸಭೆಯೇ ನೂತನ ಸಮಿತಿ ರಚಿಸಬೇಕೆಂದು ಶುಭದ್ ರಾವ್ ಆಗ್ರಹಿಸಿದರು. ಪ್ರದೀಪ್ ರಾಣೆ ದನಿಗೂಡಿಸಿ ನನ್ನ ವಾರ್ಡ್ ನಲ್ಲಿರುವ ರುದ್ರಭೂಮಿ ಇದಾಗಿದ್ದು ಅಧ್ಯಕ್ಷರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸಬೇಕು. ಅಲ್ಲದೇ ಇದರ ನಿರ್ವಹಣೆಯನ್ನು ಪುರಸಭೆ ನೋಡಿಕೊಳ್ಳುವುದು ಸೂಕ್ತ ಎಂದರು. ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸಕ್ಕೆ ತೊಡುಕಾಗುತ್ತಿದ್ದು, ಖಾಲಿ ಹುದ್ದೆಗಳನ್ನು ಸೇವಾ ಸಕ್ರಮಾತಿಯಡಿ ಭರ್ತಿ ಮಾಡಬೇಕೆಂದು ಸದಸ್ಯ ಅಶ್ಪಕ್ ಅಹಮ್ಮದ್ ಒತ್ತಾಯಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವ ನಿಯಮಾವಳಿಯಿದೆ. ಕನಿಷ್ಠ ವೇತನ ನೆಲೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸೇವಾಭದ್ರತೆ ಇಲ್ಲ. ತೆರಿಗೆ ವಸೂಲಿಗಾರ, ಕಂಪ್ಯೂಟರ್ ಆಪರೇಟರ್, ಗಾರ್ಡನರ್, ಕ್ಲೀನರ್,ಲೋಡರ್ ಸೇರಿದಂತೆ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಈ ಎಲ್ಲಾ ಹುದ್ದೆಗಳಿಗೆ ಹಾಲಿ ಸಿಬ್ಬಂದಿಗಳಿಗೆ ಖಾಯಂಮಾತಿ ಮಾಡಿದರೆ ಹುದ್ದೆ ಭರ್ತಿಯಾಗುತ್ತದೆ ಎಂದರು. ಈ ಬಗ್ಗೆ ಪೌರಾಡಳಿತ ಸಚಿವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಂಡೀಮಠ ಹಾಗೂ ಹಾಲಿ ಕಾರ್ಕಳ ಬಸ್ಸು ನಿಲ್ದಾಣಗಳನ್ನು ಸಮಾನವಾಗಿ ಬಳಸಬೇಕೆಂಬ ಸಾರ್ವಜನಿಕರ ಅರ್ಜಿಯ ಕುರಿತು ಸದಸ್ಯರು ಮಾತನಾಡಿ, ಹೈಕೋರ್ಟ್ ಆದೇಶದಂತೆ ಎರಡೂ ಬಸ್ ನಿಲ್ದಾಣಗಳನ್ನು ಸಮಾನವಾಗಿ ಬಳಸಬೇಕೆಂಬ ಆದೇಶವಿದ್ದರೂ ಜಿಲ್ಲಾಡಳಿತ ಆದೇಶ ಅನುಷ್ಟಾನ ಮಾಡಿಲ್ಲ, ಇದು ನ್ಯಾಯಾಂಗ ನಿಂದನೆಯಾಗಿದ್ದು, ಎರಡೂ ಬಸ್ ನಿಲ್ದಾಣಗಳನ್ನು ಸಮಾನವಾಗಿ ಬಳಸುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಅಶ್ಪಕ್‌ ಅಹಮ್ಮದ್‌ ಆಗ್ರಹಿಸಿದರು. ಪ್ರತಿಮಾ ‍ಧ್ವನಿಗೂಡಿಸಿದರು.





























































































































































































































error: Content is protected !!
Scroll to Top