ಕಾರ್ಕಳ : ಕೋವಿಡ್ ಕುರಿತು ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಆ. 11ರಂದು ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಬೆಡ್‌ಗಳ ನೂತನ ಐಸಿಯು ಘಟಕ ಉದ್ಘಾಟಿಸಿ ಬಳಿಕ ಮಾತನಾಡಿದರು.
ಸ್ವಶಿಸ್ತು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ತರಬಹುದಾಗಿದೆ. ಕೊರೊನಾ ಪಾಸಿಟಿವ್ ಬಂದವರು ಆತಂಕ ಪಡುವ ಅಗತ್ಯವಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.
ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ
ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದ ತಂಡ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯರು-ದಾದಿಯರಿಗೆ ಪ್ರಶಂಸೆ
ಕೊರೊನಾ ಪಾಸಿಟಿವ್ ಕಂಡುಬಂದವರಿಗೆ ಚಿಕಿತ್ಸೆ ನೀಡುವಲ್ಲಿ ಹಗಲಿರುವುದು ಶ್ರಮಿಸುತ್ತಿರುವ ವೈದ್ಯರು, ದಾದಿಯರ ಕಾರ್ಯ ಶ್ಲಾಘನೀಯವೆಂದು ಗೃಹ ಸಚಿವರು ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಇಚ್ಚಾಶಕ್ತಿ, ಪ್ರಯತ್ನದ ಫಲವಾಗಿ ಕಾರ್ಕಳದ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜವುಳಿ ಪಾರ್ಕ್ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಕಾರ್ಕಳ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಏತ ನೀರಾವತಿ ಯೋಜನೆ ಅನುಷ್ಠಾನಗೊಂಡಿರುವುದು ಅಭಿವೃದ್ಧಿಯ ಸಂಕೇತವೆಂದರು.
ಸರಕಾರಿ ಆಸ್ಪತ್ರೆಯಲ್ಲಿ 443 ಮಂದಿಗೆ ಚಿಕಿತ್ಸೆ
ಟೀಮ್ ಕಾರ್ಕಳದ ಸಹಕಾರದೊಂದಿಗೆ ಕಾರ್ಕಳ 35 ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 3,500 ಮಂದಿಗೆ ಯಶಸ್ವಿಯಾಗಿ ಕ್ವಾರಂಟೈನ್ ಮಾಡಲಾಗಿದೆ. ಮೂರು ತಿಂಗಳ ಅವಧಿಯಲ್ಲಿ 10, 424 ಮಂದಿಯನ್ನು ಮಾದರಿ ಪರೀಕ್ಷೆಗೊಳಪಡಿಸಲಾಗಿದೆ. 1043 ಮಂದಿಗೆ ಪಾಸಿಟಿವ್ ಬಂದಿರುತ್ತದೆ. ಜೂನ್ ತಿಂಗಳಲ್ಲಿ ಪಾಸಿಟಿವ್ ಅನುಪಾತ ಶೇ. 6 ಇದ್ದಲ್ಲಿ ಜುಲೈ ವೇಳೆಯಲ್ಲಿ ಶೇ. 15.44 ಕ್ಕೆ ಏರಿಕೆ. ಆಗಸ್ಟ್ ತಿಂಗಳಿನಲ್ಲಿ ಶೇ. 8.7 ಕಂಡು ಬಂದ್ದಿದ್ದು, ಪಾಸಿಟಿವ್ ಪ್ರಮಾಣ ಇಳಿಕೆಯಾಗಿದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 443 ಮಂದಿ ಚಿಕಿತ್ಸೆಗೆ ದಾಖಲಾಗಿದ್ದು, 419 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುತ್ತಾರೆ. ಪ್ರಸ್ತುತ 24 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭುವನೇಂದ್ರ ರೆಸಿಡೆನ್ಸಿ ಸ್ಕೂಲ್ ಅನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಿ ಅಲ್ಲಿ 177 ಮಂದಿಗೆ ಚಿಕಿತ್ಸೆ ನೀಡಲಾಗಿದೆ. 19 ಮಂದಿ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. ಕಾರ್ಕಳದ ಆರೋಗ್ಯಾಧಿಕಾರಿ, ವೈದ್ಯಾಧಿಕಾರಿ, ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಕೊರನಾದಿಂದ ಕಾರ್ಕಳ ಬಾಧಿತವಾಗಿಲ್ಲ-ವಿ.ಸುನಿಲ್ ಕುಮಾರ್
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಪ್ರೀತಿ ಗೆಹ್ಲೋಟ್, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಎಸ್‌ಪಿ ಎನ್. ವಿಷ್ಣುವರ್ಧನ್, ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಇಒ ಡಾ. ಮೇ. ಹರ್ಷ ಕೆ.ಬಿ., ಪುರಸಭಾ ಅಧ್ಯಕ್ಷೆ ರೇಖಾ ಜೆ. ಶೆಟ್ಟಿ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಪುರಸಭಾ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು, ಸಂಘ-ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಸ್ವಾಗತಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.