ಜನಮನ್ನಣೆ ಗಳಿಸಿದ ಅಧಿಕಾರಿ – ಸುನಿಲ್ ಕುಮಾರ್
ನಾನು ಕಂಡ ಆದರ್ಶ ವ್ಯಕ್ತಿತ್ವ – ಎಸಿ ರಶ್ಮಿ
ಕಾರ್ಕಳ : ಕರ್ತವ್ಯ ನಿಷ್ಠೆ, ಜನಸ್ಪಂದನೆ, ವಿಷಯದ ಕುರಿತಾದ ಸಂಪೂರ್ಣ ಮಾಹಿತಿ, ಮಾನವೀಯ ಮೌಲ್ಯಗಳ ಮೂಲಕ ಶಿವಪ್ರಸಾದ್ ರಾವ್ ಅವರು ಜನಮನ್ನಣೆಗೆ ಪಾತ್ರರಾಗಿದ್ದರು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಇತ್ತೀಚೆಗೆ ನಿಧನರಾದ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಕಾರ್ಕಳ ತಾಲೂಕು ಸರಕಾರಿ ನೌಕರರ ಸಂಘ, ಕಂದಾಯ ಇಲಾಖೆಯ ನೌಕರರ ಸಂಘ, ಗ್ರಾಮಾಡಳಿತ ಅಧಿಕಾರಿಗಳ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ವತಿಯಿಂದ ಜು.20 ರಂದು ಕಾರ್ಕಳದ ಶ್ರೀ ರಾಮ ಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಅಧಿಕಾರಿಗಳು ಜನರ ಪ್ರೀತಿ ಗಳಿಸುತ್ತಾರೆ ಎಂದಿಲ್ಲ. ಆದರೆ, ಶಿವಪ್ರಸಾದ್ ಅವರು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಯಾವುದೇ ವಿಚಾರ ಕೇಳಿದರೂ ಗೊತ್ತಿಲ್ಲ ಎನ್ನುವ ಮಾತು ಅವರಲ್ಲಿ ಇರಲಿಲ್ಲ, ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ಅಪರೂಪದ ಅಧಿಕಾರಿ. ಅವರ ಬಳಿ ಯಾರೇ ಅರ್ಜಿ ಸಲ್ಲಿಸಿದರೂ. ಅದು ಕೇವಲ ಅರ್ಜಿಯಲ್ಲ ಅದರ ಹಿಂದೆ ಒಂದು ಬದುಕಿದೆ ಎನ್ನುತ್ತಾ ನ್ಯಾಯ ಒದಗಿಸಿದವರು. ಇನ್ನು ಕೊರೋನಾದ ಸಂದರ್ಭದಲ್ಲಿನ ಅವರ ಕಾರ್ಯವೈಖರಿ ಎಂದಿಗೂ ಸ್ಮರಣೀಯ ಎಂದ ಶಾಸಕರು ಶಿವಪ್ರಸಾದ್ ಅವರ ವ್ಯಕ್ತಿತ್ವ ಎಲ್ಲಾ ಅಧಿಕಾರಿಗಳಿಗೆ ಮಾದರಿದಾಯಕ ಎಂದು ಹೇಳಿದರು.

ಸಹಾಯಕ ಆಯುಕ್ತೆ (ಎಸಿ) ರಶ್ಮಿ ಅವರು ಮಾತನಾಡಿ, ಶಿವಪ್ರಸಾದ್ ಅವರು ನಾನು ನನ್ನ ವೃತ್ತಿ ಜೀವನದಲ್ಲಿ ಕಂಡ ಆದರ್ಶ ವ್ಯಕ್ತಿತ್ವ. ಎಲ್ಲಾ ಸಂದರ್ಭದಲ್ಲೂ ಪ್ರಾಮಾಣಿಕ, ಶ್ರದ್ಧೆ ಹಾಗೂ ಸತ್ಯವಂತರಾಗಿದ್ದ ಅವರು ಸರಕಾರಿ ಸೇವೆ ಜನಾರ್ಧನ ಸೇವೆ ಎಂಬ ಮಾತನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿದವರು, ಅವರ ಅಗಲುವಿಕೆಗೆ ಕಾರ್ಕಳ ತಾಲೂಕಿನ ಜನತೆ ಕಂಬನಿ ಮಿಡಿದ ಬಗೆ ಅದನ್ನು ನಿರೂಪಿಸಿದೆ ಎಂದು ಹೇಳಿದರು.
ತಹಶೀಲ್ದಾರ್ ಪ್ರದೀಪ್ ಆರ್. ಮಾತನಾಡಿ, ಶಿವಪ್ರಸಾದ್ ಅವರು ತಮ್ಮ ಕೆಲಸದ ಬಗ್ಗೆ ಆಳವಾದ ಜ್ಞಾನದೊಂದಿಗೆ ನಿರ್ದಿಷ್ಟವಾದ ಯೋಚನೆ, ಯೋಜನೆ ಹೊಂದಿದ್ದರು. ಅವರ ಅಗಲುವಿಕೆ ಕಂದಾಯ ಇಲಾಖೆಗೆ ತುಂಬಲಾರದ ನಷ್ಟ ಎಂದು ನೋವು ವ್ಯಕ್ತಪಡಿಸಿದರು.
ಇಆರ್ಓ ಸುಬ್ರಮಣ್ಯ ಸೆಟ್ಟಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ರಾಜರಾಮ್, ಕಂದಾಯ ಇಲಾಖಾ ನೌಕರರ ಸಂಘದ ರಿಯಾಜ್, ಗ್ರಾಮಾಡಳಿತ ಅಧಿಕಾರಿಗಳ ಸಂಘದ ರವಿಚಂದ್ರ ಪಾಟೀಲ್, ಗ್ರಾಮ ಸಹಾಯಕರ ಸಂಘದ ಚಂದ್ರಶೇಖರ್ ಶೆಟ್ಟಿಗಾರ್ ಮಾತನಾಡಿ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಶಿಕ್ಷಕ ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.










































