ಕಾರ್ಕಳ : ನಿವೃತ್ತ ಸೇನಾನಿ, ಸಾಣೂರು ನಿವಾಸಿ ಸಂಕಪ್ಪ ಪೂಜಾರಿ (84) ಅ. 31ರಂದು ವಿಧಿವಶರಾಗಿದ್ದಾರೆ. 1962ರಲ್ಲಿ ಭಾರತೀಯ ಸೇನೆ ರಜಪೂತ್ ರೆಜಿಮೆಂಟ್‌ಗೆ ಸೇರ್ಪಡೆಗೊಂಡ ಸಂಕಪ್ಪ ಪೂಜಾರಿ ಅವರು 1977ರ ವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
1965ರಲ್ಲಿ ಭಾರತ – ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಸಂಕಪ್ಪ ಪೂಜಾರಿ ಅವರಿಗೆ “ಸಮರ ಸೇವಾ ಸ್ಟಾರ್ ಮೆಡಲ್” ಒಲಿದು ಬಂದಿತ್ತು. 1971-72ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದಕ್ಕಾಗಿ “ಸಂಗ್ರಾಮ್ ಮೆಡಲ್”, “25ನೇ ಸ್ವಾತಂತ್ರೋತ್ಸವದ ಮೆಡಲ್”, “ರಕ್ಷಾ ಮೆಡಲ್”, ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಕ್ಕೆ “ಮೆಡಲ್”, “ದೀರ್ಘ ಸೇವಾ ಮೆಡಲ್” ಮೊದಲಾದ ಸೇನಾ ಗೌರವದಿಂದ ಸಂಕಪ್ಪ ಪೂಜಾರಿ ಗೌರವಿಸಲ್ಪಟ್ಟಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ನ. 1ರಂದು ಸಾಣೂರಿನ ಮನೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.























