ಯಾವುದೇ ಒಂದು ಸುಳ್ಳು ದಾಖಲೆಯನ್ನು ರಚಿಸುವ ಅಂದರೆ ಒಂದು ದಾಖಲೆ ಅಥವಾ ಅದರ ಭಾಗವನ್ನು ಅಥವಾ ವಿದ್ಯುನ್ಮಾನ ದಾಖಲೆಯನ್ನು ಅಥವಾ ವಿದ್ಯುನ್ಮಾನ ಸಹಿಯನ್ನು ಕೃತಕವಾಗಿ ರಚಿಸುವ ಅಥವಾ ಇತರರಿಗೆ ಮೋಸ ಮಾಡುವ ದುರುದ್ದೇಶದಿಂದ ಅಪ್ರ‍್ರಾಮಾಣಿಕವಾಗಿ ಅದಕ್ಕೆ ಸುಳ್ಳು ಸಹಿಯನ್ನು ಅಳವಡಿಸುವ ಕೃತ್ಯವನ್ನು ಸುಳ್ಳು ದಾಖಲೆಯ ಸೃಷ್ಟನೆ ಎಂದು ಹೇಳಲಾಗುತ್ತದೆ. ಯಾವುದೇ ಒಂದು ಸುಳ್ಳು ದಾಖಲೆಯನ್ನು ಸೃಷ್ಟಿಸುವುದು ಅಥವಾ ದುರುದ್ದೇಶಪೂರ್ವಕವಾಗಿ ಅಂತಹ ಸುಳ್ಳು ದಾಖಲೆಯನ್ನು ಉಪಯೋಗಿಸಿ ದುರ್ಲಾಭ ಹೊಂದುವುದು ಅಥವಾ ಇತರರಿಗೆ ತೊಂದರೆ, ಹಾನಿ ಉಂಟುಮಾಡುವ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಸಾರ್ವಜನಿಕರಿಗೆ ಅಥವಾ ಇತರ ಯಾವುದೇ ವ್ಯಕ್ತಿಗೆ ನಷ್ಟವನ್ನುಂಟು ಮಾಡುವ ಅಥವಾ ಯಾವುದೇ ಸುಳ್ಳು ಕ್ಲೈಮ್ ಅನ್ನು ಅಥವಾ ಹಕ್ಕನ್ನು ಬೆಂಬಲಿಸುವ ಅಥವಾ ಯಾರೇ ವ್ಯಕ್ತಿಯು ಸ್ವತ್ತನ್ನು ಕೊಟ್ಟು ಬಿಡುವಂತೆ ಮಾಡುವ ಅಥವಾ ಸೂಚ್ಯ ಕರಾರನ್ನು ಮಾಡಿಕೊಳ್ಳುವಂತೆ ಪ್ರಚೋದಿಸುವ ಅಥವಾ ಮೋಸ ಮಾಡುವ ಉದ್ದೇಶದಿಂದ ಯಾವುದೇ ಸುಳ್ಳು ದಾಖಲೆಯನ್ನು ಅಥವಾ ಸುಳ್ಳು ವಿದ್ಯುನ್ಮಾನ ದಾಖಲೆಯನ್ನು ರಚಿಸಿದರೆ ಆ ವ್ಯಕ್ತಿಯು ಶಿಕ್ಷಾರ್ಹ ಅಪರಾಧವಾದ ಸುಳ್ಳು ಸೃಷ್ಟನೆ ಮಾಡಿದಂತಾಗಿ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಅಥವಾ ಜುಲ್ಮಾನೆ ಅಥವಾ ಅವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇತರರನ್ನು ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸೃಷ್ಟನೆಯ ದಾಖಲೆಯನ್ನು ಅಥವಾ ವಿದ್ಯುನ್ಮಾನ ದಾಖಲೆಯನ್ನು ಬಳಸಬೇಕೆಂದು ಉದ್ದೇಶಿಸಿ ಸುಳ್ಳು ಸೃಷ್ಟನೆ ಮಾಡಿದರೆ ಆ ವ್ಯಕ್ತಿಯು ಏಳು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಮತ್ತು ಜುಲ್ಮಾನೆಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಯಾರೇ ವ್ಯಕ್ತಿಯು ಸೃಜಿಸಿದ ದಾಖಲೆ ಅಥವಾ ವಿದ್ಯುನ್ಮಾನ ದಾಖಲೆಯ ಸುಳ್ಳು ಸೃಷ್ಟನೆಯು ಯಾವುದೇ ವ್ಯಕ್ತಿಯ ಖ್ಯಾತಿಗೆ ಕುಂದು ಉಂಟು ಮಾಡುವ ದುರುದ್ದೇಶದಿಂದ ದಾಖಲೆಯ ಸುಳ್ಳು ಸೃಷ್ಟನೆಯ ಕೃತ್ಯ ಮಾಡಿರುವ ವ್ಯಕ್ತಿಯು ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಗೆ ಮತ್ತು ಜುಲ್ಮಾನೆಗೆ ಗುರಿಯಾಗಬೇಕಾಗುತ್ತದೆ.
ಸುಳ್ಳು ದಾಖಲೆಯನ್ನು ನಿಜವಾದ ದಾಖಲೆ ಎಂಬುದಾಗಿ ಇತರರು ನಂಬುವಂತೆ ಮಾಡುವ ದುರುದ್ದೇಶದಿಂದ ಸದರಿ ದಾಖಲೆಯ ನಕಲಿ ಗಣಕೀಕೃತ ಸಹಿ ಅಥವಾ ಚಿಹ್ನೆಯನ್ನು ಮಾಡಿದರೆ ಅಂತಹ ದಾಖಲೆಯನ್ನು ನಕಲಿ ವಿದ್ಯುನ್ಮಾನ ದಾಖಲೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ನ್ಯಾಯಾಲಯ ಅಥವಾ ಸಾರ್ವಜನಿಕ ಕಛೇರಿಯ ಕಡತದ ದಾಖಲೆಯನ್ನು ನಕಲು ಮಾಡುವುದು, ಮೌಲ್ಯಯುತ ಭದ್ರತೆಗಳ ನಕಲು ದಾಖಲೆಗಳ ತಯಾರಿಕೆ, ವಂಚನೆಯ ಉದ್ದೇಶದಿಂದ ನಕಲು ದಾಖಲೆಯ ತಯಾರಿಕೆ, ಇತರರ ವ್ಯಕ್ತಿತ್ವವನ್ನು ಹಾನಿಗೊಳಿಸುವ ಉದ್ದೇಶಕ್ಕಾಗಿ ನಕಲಿ ದಾಖಲೆಯ ಸೃಷ್ಟನೆ, ನಕಲು ದಾಖಲೆ ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಅದನ್ನು ಅಸಲು ದಾಖಲೆಯೆಂಬುದಾಗಿ ಬಿಂಬಿಸಿ ಉಪಯೋಗ ಮಾಡುವುದು ಅಥವಾ ಪ್ರಯೋಗಿಸುವುದು, ನಕಲಿ ವಿದ್ಯುನ್ಮಾನ ದಾಖಲೆಗಳನ್ನು ತಯಾರಿಸುವುದು ಇತ್ಯಾದಿ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ ಶಿಕ್ಷಾರ್ಹ ಅಪರಾಧಗಳಾಗಿರುತ್ತದೆ.

























